ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್​ ಹತ್ಯೆಯ ಭಯಾನಕ ವಿಡಿಯೋ

Spread the love

ಗ್ಯಾಂಗ್​ಸ್ಟರ್​, ರಾಜಕಾರಣಿಯಾಗಿದ್ದ ಅತೀಕ್​ ಅಹ್ಮದ್​ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ನಡೆದ ಹತ್ಯೆ ಘಟನೆಯ ವಿಡಿಯೋ ವೈರಲ್​​ ಆಗಿದೆ.’ ಇದನ್ನು ರಾಷ್ಟ್ರೀಯ ಸುದ್ದಿವಾಹಿನಿಯೊಂದು ಸೆರೆಹಿಡಿದಿದೆ.

ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್​ ಹತ್ಯೆಯ ಭಯಾನಕ ವಿಡಿಯೋಪ್ರಯಾಗ್‌ರಾಜ್ (ಉತ್ತರಪ್ರದೇಶ): ಗ್ಯಾಂಗ್‌ಸ್ಟರ್, ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಮತ್ತು ಅವರ ಸಹೋದರನ ಕೊಲೆ ಉತ್ತರಪ್ರದೇಶದಲ್ಲಿ ಸಂಚಲನ ಉಂಟು ಮಾಡಿದೆ.

ಮಾಧ್ಯಮಗಳ ಕ್ಯಾಮರಾ ಎದುರೇ ಇಬ್ಬರ ಹತ್ಯೆಯಾಗಿದೆ. ವೈದ್ಯಕೀಯ ತಪಾಸಣೆಗಾಗಿ ಇಬ್ಬರನ್ನೂ ಆಸ್ಪತ್ರೆಗೆ ಕರೆತರುವಾಗಿನ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹತ್ಯೆ ಘಟನೆಯ ಇಂಚಿಂಚು ಮಾಹಿತಿ ವಿಡಿಯೋದಲ್ಲಿ ಕಾಣಬಹುದು.

ಅತೀಕ್​ ಮತ್ತು ಅಶ್ರಫ್​ರಿಗೆ ಕೈಕೋಳ ಹಾಕಿ ಪೊಲೀಸ್​ ಜೀಪಿನಲ್ಲಿ ಕರೆತರಲಾಯಿತು. ಅತೀಕ್​ ವಾಹನದಿಂದ ಇಳಿಯುವಾಗಲೇ ಯಾರ ಕಡೆಯೋ ನೋಡಿ ತಲೆ ಆಡಿಸುತ್ತಾರೆ. ಬಳಿಕ ಇಬ್ಬರನ್ನೂ ಪೊಲೀಸರು ಸುತ್ತುವರಿದು ಕರೆತರುತ್ತಾರೆ. ಬಳಿಕ ಮಾಧ್ಯಮಗಳು ಮಗನ ಸಾವಿನ ಬಳಿಕ ಅಂತ್ಯಕ್ರಿಯೆಗೆ ಯಾಕೆ ಹೋಗಲಿಲ್ಲ ಎಂದು ಅವರ ಬಳಿ ಪ್ರಶ್ನೆ ಮಾಡುತ್ತಾರೆ. ಈ ವೇಳೆ ಅತೀಕ್​ ಪ್ರತಿಕ್ರಿಯಿಸಿ, ಕರೆದುಕೊಂಡು ಹೋಗಲಿಲ್ಲ, ಹಾಗಾಗಿ ಹೋಗಲಿಲ್ಲ ಎನ್ನುತ್ತಾರೆ.

ಅತೀಕ್ ಹಿಂದಿಯಲ್ಲಿ “ನಹೀ ಲೇ ಗಯೇ ತೋ ನಹಿ ಗಯೇ” ಎಂದು ಹೇಳಿ ಮುಗಿಸುತ್ತಿದ್ದಂತೆ, ಪತ್ರಕರ್ತನ ವೇಷದಲ್ಲಿದ್ದ ಆರೋಪಿ ಪಿಸ್ತೂಲಿನಿಂದ ಅತೀಕ್​ ತಲೆಗೆ ಗುಂಡು ಹಾರಿಸುತ್ತಾನೆ. ಇದಾದ ಬಳಿಕ ಮೂವರು ಆರೋಪಿಗಳು ಏಕಕಾಲಕ್ಕೆ ಇಬ್ಬರ ಮೇಲೂ ಗುಂಡಿನ ಸುರಿಮಳೆ ಗೈದಿದ್ದಾರೆ. ಗುಂಡಿನ ಮೊರೆತ ಕೇಳಿದ ತಕ್ಷಣ ಅಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಇದು ರಾಷ್ಟ್ರೀಯ ಮಾಧ್ಯಮವೊಂದರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗುಂಡೇಟಿನಿಂದ ನೆಲಕ್ಕುರುಳಿ ಬಿದ್ದಿದ್ದ ಅತೀಕ್​ ಮತ್ತು ಅಶ್ರಫ್​ನ ಮೇಲೆ 10 ಬಾರಿ ಗುಂಡು ಹಾರಿಸಲಾಗಿದೆ. ಬಳಿಕ ಪೊಲೀಸರು ಓಡಿಬಂದು ಶೂಟರ್​ಗಳನ್ನು ಹಿಡಿದಿದ್ದಾರೆ. ಆರೋಪಿಗಳು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು. ಮೂವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಪತ್ರಕರ್ತರೊಬ್ಬರು ಓಡಿಹೋಗುವಾಗ ಕೆಳಗೆ ಬಿದ್ದಿದ್ದರಿಂದ ಗಾಯಗೊಂಡಿದ್ದಾರೆ. ಪೊಲೀಸ್​ ಸಿಬ್ಬಂದಿಗೆ ಬುಲೆಟ್ ತಾಕಿದೆ ಎಂದು ಪ್ರಯಾಗರಾಜ್ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ತಿಳಿಸಿದ್ದಾರೆ.

ಕೋರ್ಟ್​ಗೆ ಕೊಲೆ ಆರೋಪಿಗಳು ಹಾಜರು: ಗ್ಯಾಂಗ್​ಸ್ಟರ್​ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್​ ಅವರನ್ನು ಗುಂಡಿಕ್ಕಿ ಕೊಂದ ನಂತರ ಬಂಧಿತರಾಗಿರುವ ಮೂವರು ದುಷ್ಕರ್ಮಿಗಳನ್ನು ಇಂದು ಕೋರ್ಟ್​ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರೂ ದಾಳಿಕೋರರು ಶರಣಾದ ನಂತರ ಅವರನ್ನು ಪೊಲೀಸರ ಕಸ್ಟಡಿಯಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಲಾಗಿದೆ.

ಹತ್ಯೆಯ ನಂತರ ರಾಜ್ಯ ಸರ್ಕಾರ ಭಾನುವಾರ ಎಲ್ಲಾ ಜಿಲ್ಲೆಗಳಲ್ಲಿ ಸಿಆರ್​ಪಿಸಿ ಸೆಕ್ಷನ್ 144 ಜಾರಿ ಮಾಡಿ ಬಿಗಿ ಪೊಲೀಸ್​ ಬಂದೋಬಸ್ತ್​ ಹಾಕಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ರಾತ್ರಿಯೇ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಿಗಿ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೇ, ಶೂಟೌಟ್​ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ತನಿಖೆಗೆ ಸೂಚನೆ ನೀಡಿದ್ದಾರೆ.

2005 ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದಲ್ಲಿ ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ಬಿಎಸ್‌ಪಿ ಮುಖಂಡನ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಅತೀಕ್‌ ಅಹ್ಮದ್‌ ಆರೋಪಿಯಾಗಿದ್ದರು.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ