ರಾಮದುರ್ಗ (ಬೆಳಗಾವಿ ಜಿಲ್ಲೆ): ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕಡೆಗಣಿಸಿ, ಕ್ಷೇತ್ರದ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ಶಾಸಕರ ಮನೆ ಮುಂದೆ ಜಮಾವನೆಗೊಂಡ ಅಪಾರ ಸಂಖ್ಯೆಯ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
‘ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸಿದವರು ಮಹಾದೇವಪ್ಪ. ಅವರಿಗೆ ಟಿಕೆಟ್ ನೀಡದಿರಲು ಕಾರಣ ಕೊಡಬೇಕು. ತಳಮಟ್ಟದ ಕಾರ್ಯಕರ್ತರ ಅನಿಸಿಕೆಗೂ ಬೆಲೆ ಕೊಡುತ್ತೇವೆ ಎಂದು ಹೇಳಲಿದ ಬಿಜೆಪಿ ನಾಯಕರು ಮಾತು ತಪ್ಪಿದ್ದಾರೆ. ಇಡೀ ಪಕ್ಷ ಇಬ್ಬರು ವ್ಯಕ್ತಿಗಳ ಮಾತಿನಂತೆ ಕುಣಿಯುತ್ತಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ಬೀಳಗಿ ಆಕ್ರೋಶ ಹೊರಹಾಕಿದರು.
‘ಮಹಾದೇವಪ್ಪ ಅವರಲ್ಲದೇ ಪಕ್ಷದಲ್ಲಿಯೇ ಇನ್ನೂ ಹಲವರು ಆಕಾಂಕ್ಷಿಗಳು, ಸರ್ಥರು ಇದ್ದರು. ಎಲ್ಲರನ್ನೂ ಕಡೆಗಣಿಸಿ, ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಕಾರಣವೇನು? ಬಿಜೆಪಿ ನಾಯಕರು ಆ ಉದ್ಯಮಿಗೆ ಟಿಕೆಟ್ ಮಾರಿಕೊಂಡಿದ್ದಾರೆ. ಈ ನಡೆ ಖಂಡಿಸಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ’ ಎಂದೂ ಕಿಡಿ ಕಾರಿದರು.