ಬೆಂಗಳೂರು: ಬಿಜೆಪಿ ಮತ್ತು ಆ ಪಕ್ಷದ ನಾಯಕರಿಗೆ ರಾಮಾಯಣವೂ ಗೊತ್ತಿಲ್ಲ. ರಾಮನ ಬಗ್ಗೆ ಪ್ರೀತಿಯೂ ಇಲ್ಲ. ಅವರಲ್ಲಿರುವುದು ಚುನಾವಣೆಗಾಗಿ ಕೇವಲ ತೋರಿಕೆಯ ಪ್ರೀತಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಬೆಳಗಾದರೆ ರಾಮನ ಬಗ್ಗೆ ಮಾತನಾಡುವ ಬಿಜೆಪಿ ಶಾಸಕರಲ್ಲಿ ಎಷ್ಟು ಜನ ರಾಮಾಯಣ ಓದಿದ್ದಾರೆ? ಎಷ್ಟು ಜನ ವಿಷ್ಣುಪುರಾಣ ಪಠಿಸಿದ್ದಾರೆ ತೋರಿಸಲಿ. ಅಂತಹವರು ಯಾರೂ ಸಿಗುವುದಿಲ್ಲ. ಅವರಿಗೆ ರಾಮನ ಬಗ್ಗೆ ಪ್ರೀತಿ, ಗೌರವ ಏನೂ ಇಲ್ಲ. ಬರೀ ಚುನಾವಣೆ ಪ್ರಚಾರಕ್ಕಾಗಿ ಈ ಗಿಮಿಕ್ ಮಾಡುತ್ತಾರಷ್ಟೇ’ ಎಂದು ದೂರಿದರು.
ಅಷ್ಟೇ ಅಲ್ಲ, ಎಷ್ಟೆಲ್ಲಾ ಗದ್ದಲ ಎಬ್ಬಿಸಿ, ಹಠಕ್ಕೆ ಬಿದ್ದು ಗೋಹತ್ಯೆ ನಿಷೇಧ ಕಾಯ್ದೆ ತಂದರು. ಪುಣ್ಯಕೋಟಿ ಯೋಜನೆ ಅಡಿ ಎಷ್ಟು ಜನ ಬಿಜೆಪಿ ಶಾಸಕರು ಎಷ್ಟು ಗೋವುಗಳನ್ನು ದತ್ತು ಪಡೆದಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.