Breaking News

ರಮೇಶ್‌ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರ ಕುರಿತಂತೆ ಸಿ.ಡಿ ಸೃಷ್ಟಿಸಿ ಅವರಿಗೆ ಕಿರುಕುಳ ಕೊಡುವುದೇ ಕಾಂಗ್ರೆಸ್‌ ಕೆಲಸ: ಡಾ.ಅಶ್ವತ್ಥನಾರಾಯಣ

Spread the love

ಬಂಗಾರಪೇಟೆ (ಕೋಲಾರ): ‘ರಮೇಶ್‌ ಜಾರಕಿಹೊಳಿ ಸೇರಿದಂತೆ ವಿವಿಧ ನಾಯಕರ ಕುರಿತಂತೆ ಸಿ.ಡಿ ಸೃಷ್ಟಿಸಿ ಅವರಿಗೆ ಕಿರುಕುಳ ಕೊಡುವುದೇ ಕಾಂಗ್ರೆಸ್‌ ಕೆಲಸವಾಗಿದೆ. ಕಾಂಗ್ರೆಸ್‌ ಎಂದರೆ ಸಿ.ಡಿ ಪಕ್ಷ, ಬ್ಲ್ಯಾಕ್‌ ಮೇಲ್‌ ಪಕ್ಷ. ಕೆಪಿಸಿಸಿ ಅಧ್ಯಕ್ಷರೇ ಇದರ ಪರಿಣತ’ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ ಯಾವತ್ತೂ ಉತ್ತಮ ಆಡಳಿತದ ಬಗ್ಗೆ ಮಾತನಾಡಲ್ಲ. ಅದು ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟಿರುವ ಕಳಂಕಿತ ಪಕ್ಷ‌. ‘ಸಿ’ ಎಂದರೆ ಕಾಂಗ್ರೆಸ್‌, ‘ಸಿ’ ಎಂದರೆ ಕರಪ್ಷನ್‌’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಾದಾಮಿ ಎಲ್ಲಾ ಸುತ್ತಾಡಿಕೊಂಡು ಈಗ ಕೋಲಾರಕ್ಕೆ ಬಂದಿದ್ದಾರೆ. 10 ವರ್ಷಗಳಿಂದ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಲೇ ಇರುವ ಅವರನ್ನು ಈ ಬಾರಿ ಮನೆಗೆ ಕಳುಹಿಸಬೇಕು. ಅವರ ಅಧಿಕಾರ ದಾಹ ಕೋಲಾರದಲ್ಲೇ ಸಮಾಪ್ತಿಯಾಗಲಿದೆ’ ಎಂದರು.

‘ಹೇಳಿಕೊಳ್ಳುವುದು ಸಮಾಜವಾದಿ ಎಂದು. ಆದರೆ, ಅವರ ರಕ್ತದ ಕಣ ಕಣಗಳಲ್ಲಿ ವಂಶಪಾರಂಪರ್ಯ ರಾಜಕೀಯ ತುಂಬಿಕೊಂಡಿದೆ. ವಂಶಪಾರಂಪರ್ಯ ರಾಜಕಾರಣ ಮಾಡಿಕೊಂಡು ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ’ ಎಂದು ಹರಿಹಾಯ್ದರು.

’60 ವರ್ಷಗಳಿಂದ ಚುನಾವಣೆಗಳಲ್ಲಿ ಗೆದ್ದು ಬಂದವರು ಕೋಲಾರ ಜಿಲ್ಲೆಗೆ ಏನೂ ಮಾಡಿಲ್ಲ. ಬಿಜೆಪಿ ಬಂದ ಮೇಲೆ ಜಿಲ್ಲೆಗೆ ವಿಶ್ವವಿದ್ಯಾಲಯ, ಹೊಸ ಕೈಗಾರಿಕಾ ಪಾರ್ಕ್, ಎಲೆಕ್ಟ್ರಾನಿಕ್ ಕ್ಲಸ್ಟರ್ ತರಲಾಗಿದೆ’ ಎಂದು ಹೇಳಿದರು.

‘ಜೆಡಿಎಸ್ ಪಕ್ಷಕ್ಕೆ ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡುವುದು ಗೊತ್ತೇ ಹೊರತು ಅಭಿವೃದ್ಧಿ ಎಂದರೇನು ಗೊತ್ತಿಲ್ಲ. ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಚಾರದಲ್ಲಿ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ’ ಎಂದು ಟೀಕಿಸಿದರು.

‘ದಶಪಥ ರಸ್ತೆಗೆ ಇನ್ನೂ ₹ 1 ಸಾವಿರ ಕೋಟಿ ವಿನಿಯೋಗಿಸಲಾಗುವುದು. ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಈಗಾಗಲೇ ಕೇವಲ ರಸ್ತೆಗಳ ಅಭಿವೃದ್ಧಿಗೆ ₹ 40 ಸಾವಿರ ಕೋಟಿ ಅನುದಾನ ನೀಡಿದೆ’ ಎಂದು ಹೇಳಿದರು.

‘ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿ ಇರುವ ಬಿಜೆಪಿಯು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದರು.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ