ಬೆಳಗಾವಿ: ಬೇರೆಯವರ ಎಟಿಎಂ ಕಾರ್ಡ್ ಬದಲಾಯಿಸಿ, ಹಣ ತೆಗೆದುಕೊಂಡ ಮಹಾರಾಷ್ಟ್ರದ ಇಬ್ಬರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲ್ಲೂಕಿನ ನೇಸರಿಯ ಅಮೋಲ್ ಶೆಂಡೆ, ಸೊಲ್ಲಾಪುರ ಜಿಲ್ಲೆಯ ಕೇದಾರನಾಥ ನಗರದ ಶ್ರವಣ ಮಿನಜಗಿ ಬಂಧಿತರು.
ಇವರಿಬ್ಬರೂ ಬೆಳಗಾವಿಯ ನಿವಾಸಿ ಸೋಮಲಿಂಗ ಅಮ್ಮಣಗಿ ಅವರ ಎಟಿಎಂ ಕಾರ್ಡ್ ಬದಲಿಸಿ, ₹4.03 ಲಕ್ಷ ಹಣ ತೆಗೆದುಕೊಂಡಿದ್ದರು. ಈ ಬಗ್ಗೆ 2022ರ ನ.29ರಂದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಂಧಿಸಿದ್ದಾರೆ. ಅವರಿಂದ 20 ಗ್ರಾಂ ತೂಕದ ಚಿನ್ನಾಭರಣ, ₹1.39 ಲಕ್ಷ ನಗದು, ₹3.60 ಲಕ್ಷ ಮೌಲ್ಯದ 2 ದ್ವಿಚಕ್ರ ವಾಹನ ವಶಪಡಿಸಿಕೊಕೊಳ್ಳಲಾಗಿದೆ.
ಇನ್‌ಸ್ಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.