ಬೆಂಗಳೂರು: ಕಂಟೈನ್ಮೆಂಟ್ ಝೋನ್‍ಗಳಿಗಷ್ಟೇ ಲಾಕ್‍ಡೌನ್ ಸೀಮಿತ ಮಾಡಿ ಎಂದು ದೇಶದ ಬಹುತೇಕ ಮುಖ್ಯಮಂತ್ರಿಗಳು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಧಾನ ಮಂತ್ರಿಯವರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕರ್ನಾಟಕದ ಸಲಹೆಗಳನ್ನು ಮುಂದಿಟ್ಟಿದ್ದು, ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು. ಕಂಟೈನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ.
ಸಿಎಂ ಬಿಎಸ್‍ವೈ ಮುಖ್ಯಮಂತ್ರಿಗಳು ಮಂಡಿಸಿದ ಅಂಶಗಳು: ಕನಿಷ್ಠ ಮೇ ಅಂತ್ಯದವರೆಗೆ ದೇಶದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಗಳನ್ನು ಪ್ರಾರಂಭಿಸಬಾರದು. ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಬೇಕು. ಅಂತರರಾಜ್ಯ ಪ್ರಯಾಣಿಕರನ್ನು ಸಹ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮತ್ತು ಪರೀಕ್ಷೆಗೆ ಒಳಪಡಿಸಬೇಕು. ಅಂತರರಾಜ್ಯ ಪ್ರಯಾಣಿಕರು ತಾವು ಹೊರಡುವ ಸ್ಥಳದಲ್ಲಿ ಆರೋಗ್ಯ ಪ್ರಮಾಣ ಪತ್ರವನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಆರೋಗ್ಯ ಪ್ರಮಾಣ ಪತ್ರ ಹೊಂದಿಲ್ಲದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಿಸಬೇಕು.
ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು. ಕಂಟೈನ್ಮೆಂಟ್ ವಲಯಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಕ್ಲಸ್ಟರ್ ಗಳ ಸುತ್ತಲಿನ 50 ರಿಂದ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಬೇಕು. ಇತರ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಬೇಕು. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸಾಧ್ಯವಾಗುವುದಲ್ಲದೆ, ರಾಜ್ಯಗಳು ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಇತರ ವೈದ್ಯಕೀಯ ಚಿಕಿತ್ಸೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕಾರ್ಯನಿರ್ವಹಿಸುವ ಕುರಿತು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಪರೀಕ್ಷೆ ನಡೆಸುವ ಕುರಿತು ಒಂದು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಪ್ರತಿ 10 ಲಕ್ಷಕ್ಕೆ ಕನಿಷ್ಠ ಎಷ್ಟು ಪರೀಕ್ಷೆ ನಡೆಸಬೇಕು ಎಂದು ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಬೇಕು. ಕೇವಲ ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಹೊಂದಿರುವವರಿಗೆ ಮಾತ್ರ ಪರೀಕ್ಷೆ ನಡೆಸಬೇಕು.
ಈ ಸೋಂಕಿಗೆ ಚಿಕಿತ್ಸೆ ನೀಡಲು ಟೆಲಿ-ಮೆಡಿಸಿನ್ ಅನ್ನು ವ್ಯಾಪಕವಾಗಿ ಬಳಸಬೇಕು. ತೀವ್ರ ರೋಗ ಲಕ್ಷಣ ಹೊಂದಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೈತೊಳೆಯವುದು, ವೈಯಕ್ತಿಕ ಮತ್ತು ಸಾಮುದಾಯಿಕ ಶುಚಿತ್ವ ಕಾಪಾಡಿಕೊಳ್ಳುವುದು ಮೊದಲಾದ ಅಭ್ಯಾಸಗಳ ಮೂಲಕ ಹೊಸ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು.
ಮೀಡಿಯಾ ಬುಲೆಟಿನ್‍ಗಳಲ್ಲಿ ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದ ಪ್ರಕರಣಗಳ ವಿವರ ಇರಬೇಕು. ಒಟ್ಟಾರೆ ಪ್ರಕರಣಗಳ ಸಂಖ್ಯೆಯ ಮಾಹಿತಿ ಜನರಲ್ಲಿ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಮಧ್ಯಮ ಮತ್ತು ತೀವ್ರ ಸೋಂಕಿನ ಲಕ್ಷಣ ಹೊಂದಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು. ರೋಗ ಲಕ್ಷಣಗಳಿಲ್ಲದ ಅಥವಾ ತೀವ್ರವಲ್ಲದ ಪ್ರಕರಣಗಳಲ್ಲಿ ಮನೆಯಲ್ಲಿಯೇ ಕಟ್ಟು ನಿಟ್ಟಿನ ಐಸೋಲೇಷನ್ ನಲ್ಲಿರುವ ಮೂಲಕ ಹಾಗೂ ಟೆಲಿ-ಮೆಡಿಸಿನ್ ಮೂಲಕ ಚಿಕಿತ್ಸೆ ಪಡೆಯಲು ಸಲಹೆ ನೀಡಬಹುದು. 60 ವರ್ಷಕ್ಕೂ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನವರು ಮನೆಯೊಳಗೇ ಸುರಕ್ಷಿತವಾಗಿರುವಂತೆ ಸಲಹೆ ನೀಡಬೇಕು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಾಲ್ಕು ಟಿ ಗಳು (ಟ್ರೇಸಿಂಗ್, ಟ್ರಾಕಿಂಗ್, ಟೆಸ್ಟಿಂಗ್ ಅಂಡ್ ಟ್ರೀಟಿಂಗ್) ಪ್ರಮುಖ ಪಾತ್ರ ವಹಿಸಿವೆ. ರಾಜ್ಯದಲ್ಲಿ ಪ್ರಸ್ತುತ 35 ಪ್ರಯೋಗಾಲಯಗಳಲ್ಲಿ ದಿನಕ್ಕೆ 6 ಸಾವಿರ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ 60 ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿ ವತಿಯಿಂದ 93,723 ಆರೋಗ್ಯ ಕಾರ್ಯಕರ್ತರಿಗೆ ಆನ್‍ಲೈನ್ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ 58 ಲಕ್ಷಕ್ಕೂ ಹೆಚ್ಚು ಜನರು ಆರೋಗ್ಯ ಸೇತು ಆ್ಯಪ್‍ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಜನರನ್ನು ಹೊಸ ಜೀವನ ಶೈಲಿ ಅಳವಡಿಸಲು ಜಾಗೃತಿ ಮೂಡಿಸಿ, ಮನ ಒಲಿಸಬೇಕು. ಕೋವಿಡ್-19 ಕುರಿತು ಜನರ ಪೂರ್ವಾಗ್ರಹಗಳನ್ನು ತೊಡೆಯಲು ಇದು ಫ್ಲೂ ನಂತೆಯೇ ಒಂದು ವೈರಲ್ ಸೋಂಕು, ಆದರೆ ಇತರ ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯಕಾರಿ ಎಂಬ ಅರಿವು ಮೂಡಿಸಬೇಕು.