ಮೈಸೂರು: ಮೈಸೂರಿನಲ್ಲಿ ಕೊರೋನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ
ವಾಹನ ಸಂಚಾರ ಹೆಚ್ಚಾಗಿದ್ದು, ಅನಗತ್ಯವಾಗಿ ರಸ್ತೆಗೀಳಿದವರಿಗೆ ಜಿಲ್ಲಾಡಳಿತ ದಂಡ ವಿಧಿಸುತ್ತಿದೆ.
ಮಧ್ಯಾಹ್ನ 12 ಗಂಟೆಯ ನಂತರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ದಂಡ ವಿಧಿಸಲು ತೀರ್ಮಾನಿಸಿದೆ. ಆಸ್ಪತ್ರೆ, ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಉಳಿದ ವ್ಯವಹಾರಗಳಿಗೆ ನಿರ್ಬಂಧ ಹೇರಲಾಗಿದೆ.
ನಿಯಮ ಉಲ್ಲಂಘಿಸಿ ವಾಹನ ಸಂಚಾರ ಮಾಡಿದರೆ 2 ಸಾವಿರ ದಂಡ ವಿಧಿಸಲಾಗುತ್ತಿದೆ. ಈಗಾಗಲೇ 5 ಸಾವಿರ ವಾಹನಗಳನ್ನು ಸೀಜ್ ಮಾಡಿರುವ ಮೈಸೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ. ಒಟ್ಟು 1.68 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಮೈಸೂರು ಇನ್ನೂ ರೆಡ್ ಜೋನ್ನಲ್ಲೇ ಇದೆ. ಹಾಗಾಗಿ ದಂಡ ಪ್ರಕ್ರಿಯೆ ಮುಂದುವರೆಯುತ್ತದೆ. ಸಾರ್ವಜನಿಕ ಅನಗತ್ಯ ಓಡಾಟ ನಿಲ್ಲಿಸಬೇಕು ಎಂದು
ಮೈಸೂರು ಡಿಸಿಪಿ ಪ್ರಕಾಶ್ ಗೌಡ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ ಮುಂದುವರೆಯಲಿದೆ. ಹೊರಗಿನಿಂದ ಬಂದ ಎಲ್ಲರೂ ಕೂಡ ಸರ್ಕಾರ ನಿಗದಿಪಡಿಸಿದ ಹಾಸ್ಟೆಲ್ನಲ್ಲೆ ಕ್ವಾರಂಟೈನ್ ಮಾಡಲಾಗುತ್ತದೆ. ಹೋಟೆಲ್ನಲ್ಲೇ ಕ್ವಾರಂಟೈನ್ ಆಗುತ್ತೇವೆ ಎಂದರೆ ಹಣ ನೀಡಬೇಕು. ಹೊರ ರಾಜ್ಯದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶ ಹೊರಡಿಸಿದ್ದಾರೆ.