ಬೆಳಗಾವಿ: ‘ಚುನಾವಣೆ ಸಮೀಪಿಸಿದ ಸಂದರ್ಭದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಲ್ಪಾವಧಿ ಟೆಂಡರ್ ಮತ್ತು ಕಾರ್ಯಾದೇಶ ನೀಡುತ್ತಿದ್ದಾರೆ. ಇದು ಲೂಟಿ ಮಾಡುವ ತಂತ್ರ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
‘ಚುನಾವಣೆ ನೀತಿ ಸಂಹಿತೆ ಬರುವುದಕ್ಕೂ ಮುನ್ನ ಹಣ ಸಂಗ್ರಹಿಸಿಡಲು ಬಿಜೆಪಿ ಸರ್ಕಾರ ಈ ಉಪಾಯ ಮಾಡಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ. 15 ದಿನಗಳಲ್ಲಿ ಈ ಎಲ್ಲ ಟೆಂಡರ್, ಕಾರ್ಯಾದೇಶಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸುತ್ತೇವೆ. ಅಧಿಕಾರಿ, ಗುತ್ತಿಗೆದಾರ ಎಲ್ಲರನ್ನೂ ಮನೆಗೆ ಕಳುಹಿಸುತ್ತೇವೆ’ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.
‘ನೀರಾವರಿ ಇಲಾಖೆಯಿಂದ ಜಿಲ್ಲೆಗೆ ಮಂಜೂರಾದ ಯೋಜನೆಗೆ ನಮ್ಮ ಅವಧಿಯಲ್ಲಿ ₹ 300 ಕೋಟಿ ನಿಗದಿ ಮಾಡಿದ್ದೇವು. ಈಗ ಅದನ್ನು ₹ 938 ಕೋಟಿ ಅಂದಾಜು ವೆಚ್ಚ ಮಾಡಿದ್ದಾರೆ. ಇದು ಲೂಟಿ ಅಲ್ಲದೇ ಮತ್ತೇನು? ಈ ಕಾಮಗಾರಿಯ ಕಾರ್ಯಾದೇಶ ಹೊರಬೀಳಲಿ, ದೊಡ್ಡ ಮಟ್ಟದ ತನಿಖೆ ಮಾಡಿಸುತ್ತೇನೆ’ ಎಂದು ಅವರು, ಗೋಕಾಕ ಕ್ಷೇತ್ರಕ್ಕೆ ಒಳಗಟ್ಟ ಘಟ್ಟಿ ಬಸವಣ್ಣ ಏತ ನೀರಾವರಿ ಕುರಿತಾಗಿ ಹೇಳಿದರು.
‘ಇದರ ಮಂಜೂರಾತಿ ಹಿಂದೆ ಯಾರಿದ್ದಾರೆ, ಯಾರಿಗೆ ಟೆಂಡರ್ ಕೊಡಲಾಗುತ್ತಿದೆ, ಅವರ ಅರ್ಹತೆ ಏನು ಎಂಬ ಬಗ್ಗೆ ಮಾಹಿತಿ ನನ್ನ ಬಳಿ ಇದೆ. ಇಂಥದ್ದೇ ಯತ್ನ ರಾಯಚೂರಿನಲ್ಲೂ ನಡೆದಿದೆ. ನಮ್ಮ ಸರ್ಕಾರ ಬಂದ ತಕ್ಷಣ ಇದಕ್ಕೊಂದು ಗತಿ ಕಾಣಿಸುತ್ತೇವೆ’ ಎಂದರು.
‘ಅಗತ್ಯವಸ್ತುಗಳ ಬೆಲೆ ಏರಲು ಬಿಜೆಪಿ ಸರ್ಕಾರದ ಭ್ರಷ್ಟಾಚಾರವೇ ಕಾರಣ. ಕುಟುಂಬವೊಂದರ ಯಜಮಾನಿಗೆ ₹ 2,000 ನೀಡಲು ಹಣ ಎಲ್ಲಿಂದ ತರುತ್ತೀರಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಭ್ರಷ್ಟಾಚಾರ ನಿಲ್ಲಿಸಿದರೆ ಹಣ ತಾನಾಗಿಯೇ ಸರ್ಕಾರದ ಬಳಿ ಉಳಿಯುತ್ತದೆ’ ಎಂದರು.
‘ರಾಜ್ಯ ಸರ್ಕಾರದ ಭ್ರಷ್ಟಾಚಾರಗಳನ್ನು ಖಂಡಿಸಿ ಮಾರ್ಚ್ 9ರಂದು ಎರಡು ತಾಸುಗಳವರೆಗೆ ಪ್ರತಿಭಟನೆ, ಬಂದ್ ಮಾಡುತ್ತೆವೆ’ ಎಂದೂ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ರಮೇಶ ಜಾರಕಿಹೊಳಿ ಯತ್ನ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವನೊಬ್ಬ ಮೆಂಟಲ್. ಅಂಥವನ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.