Breaking News

ಗ್ರಾಮದೇವಿಯರ ಭವ್ಯ ಮೆರವಣಿಗೆ; ಅಸಂಖ್ಯಾತ ಭಕ್ತರು ಭಾಗಿ

Spread the love

ಲಘಟಗಿ: ಶ್ರೀ ಗ್ರಾಮದೇವಿಯರ 9 ದಿನಗಳ ಕಾಲ ಜರುಗಲಿರುವ ಜಾತ್ರಾ ಮಹೋತ್ಸವದ ದೇವಿಯರ ಮೆರವಣಿಗೆ ಬುಧವಾರ ಮಧ್ಯಾಹ್ನ ಶ್ರೀ ಗ್ರಾಮದೇವಿ ದೇವಸ್ಥಾನದಿಂದ ಆರಂಭಗೊಂಡಿತು. ಅಸಂಖ್ಯಾತ ಭಕ್ತಸಾಗರದ ಮಧ್ಯೆ ಸಾಗಿ ಬಂದ ಶ್ರೀ ದುರ್ಗವ್ವ ಮತ್ತು ಶ್ರೀ ದ್ಯಾಮವ್ವರ ಮೂರ್ತಿಗಳನ್ನು ಅಕ್ಕಿ ಓಣಿಯಲ್ಲಿರುವ ಚೌತ ಮನೆಕಟ್ಟೆಯ ಜಾತ್ರಾ ಮಂಟಪದಲ್ಲಿ ವಿರಾಜಮಾನಗೊಳಿಸಲಾಯಿತು.

 

ಶ್ರೀ ಗ್ರಾಮದೇವಿಯರನ್ನು ಸಂಭ್ರಮ ಸಡಗರ, ಸಕಲ ಮಂಗಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಜೋಳದ ಓಣಿ, ಮಾರ್ಕೆಟ್‌ ರೋಡ ಮುಖಾಂತರ ಅಕ್ಕಿ ಓಣಿಯಲ್ಲಿರುವ ಜಾತ್ರಾ ಮಂಟಪಕ್ಕೆ ಭಕ್ತ ಸಮೂಹದ ಜೈಕಾರದೊಂದಿಗೆ ಸಹಸ್ರಾರು ಭಕ್ತರು ಹೊತ್ತುಕೊಂಡು ಬಂದು ಪುನೀತರಾದರು.

ದಾರಿಯುದ್ದಕ್ಕೂ ತಳಿರು ತೋರಣ ಹಾಗೂ ಕೇಸರಿ ಬಾವುಟಗಳಿಂದ ಶೃಂಗರಿಸಲಾಗಿತ್ತು. ಮನೆ, ಅಂಗಡಿ ಮುಂಗ್ಗಟ್ಟುಗಳ ಮುಂದೆ ಮಹಿಳೆಯರೆಲ್ಲರೂ ಚಿತ್ರಿಸಿದ ರಂಗೋಲಿ ಮನರಂಜಿಸಿತು. ಮೆರವಣಿಗೆಯಲ್ಲಿ ಕರಡಿ ಮಜಲು, ಝಾಂಜ್‌ಮೇಳ, ಹೆಜ್ಜೆ ಮೇಳ, ಕೋಲಾಟ, ಬೇಡರ ವೇಷ, ದಕ್ಷಿಣಕನ್ನಡ ಜಿಲ್ಲೆಯ ಚಂಡೆ ಮದ್ದಳೆ, ಹುಲಿವೇಷ, ಕೀಲಕುದುರೆ ಸಕಲವಾದ್ಯ ಮೇಳಗಳ ಜತೆಗೆ ರಾಣಿಗೇರ, ಮಾತಂಗಿಯರು, ಜೋಗಮ್ಮಗಳು ಸಾಗಿದರೆ, ಸಹಸ್ರಾರು ಭಕ್ತರು ಉಧೋ ಉಧೋ
ಎಂಬ ಜಯಘೋಷ ಹಾಕಿದರು.

ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರೊಂದಿಗೆ ಅಲ್ಲಲ್ಲಿ ತಾತ್ಕಾಲಿಕ ನಲ್ಲಿಗಳ ಜೋಡಣೆ ಮಾಡಿ ಕುಡಿಯುವ ನೀರು, ಸಂಚಾರಿ ಶೌಚಾಲಯ, ಮೂತ್ರಾಲಯಗಳ ವ್ಯವಸ್ಥೆ ಮಾಡಿದ್ದರು. ಸ್ವತ್ಛತೆ ಹಾಗೂ ಬೀದಿದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲ ತಯಾರಿ ಮಾಡಲಾಗಿತ್ತು. ಸರಕಾರಿ ನೌಕರರ ಮುಷ್ಕರ ಇದ್ದರೂ ಪಟ್ಟಣದ ಜಾತ್ರಾ ವ್ಯವಸ್ಥೆಗೆ ಯಾವುದೇ ಅನಾನುಕೂಲ ಉಂಟಾಗದಿರಲು ಸಾರ್ವಜನಿಕರ ಹಿತಾಸಕ್ತಿಗೋಸ್ಕರ ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ಸಿಬ್ಬಂದಿ ಸೇವಾ ನಿರತರಾಗಿ ಜನ ಮೆಚ್ಚುಗೆಗೆ ಪಾತ್ರರಾದರು.

ಪೊಲೀಸರು ಹೆಚ್ಚುವರಿ ಪೊಲೀಸ್‌ ಹಾಗೂ ಹೋಂ ಗಾರ್ಡ್‌ ಗಳನ್ನು ನೇಮಿಸಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ ನಿಗಾ ವಹಿಸಿದ್ದರು. ಆರೋಗ್ಯ ಇಲಾಖೆಯವರು ಜಾತ್ರಾ ಸ್ಥಳದಲ್ಲಿಯೇ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಠಿಕಾಣಿ ಹೂಡಿದ್ದರು. ಹೆಸ್ಕಾಂ ಹಾಗೂ ಅಗ್ನಿಶಾಮಕದವರು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಯಾವುದೇ ಅಗ್ನಿ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಮಾ.2ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರತಿ ದಿನ ರಾತ್ರಿ 10 ಗಂಟೆಗೆ ಮಹಾ ಮಂಗಳಾರತಿ, ನಂತರ ಭಕ್ತಿ ಗೀತೆ, ಜಾನಪದ ಗೀತೆ, ಡೊಳ್ಳಿನ ಪದ, ಸೋಬಾನ ಪದ ಮುಂತಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆಲ್ಲ ಬೆಳಿಗ್ಗೆ 11ರಿಂದ ರಾತ್ರಿಯವರೆಗೂ ನಿರಂತರ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಟ್ರಸ್ಟ್‌ ಕಮೀಟಿ, ಶ್ರೀ ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಜತೆಗೆ ಪಟ್ಟಣದ ಯುವಕರು, ವಿವಿಧ ಸಂಘ-ಸಂಸ್ಥೆಗಳವರು, ಕಲಘಟಗಿ ಸುತ್ತಲಿನ ಗ್ರಾಮಗಳ ಭಕ್ತ ಜನರು ಜಾತ್ರಾ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ