ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ಮಹಾಶಿವರಾತ್ರಿಯ ಸಡಗರ ಮನೆ ಮಾಡಿತು. ನಸುಕಿನಿಂದಲೇ ಹಲವು ಭಕ್ತರು ಶಿವಾಲಯಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ನಗರದ ಕಪಿಲೇಶ್ವರ ಮಂದಿರ, ಮಿಲಿಟರಿ ಮಹಾದೇವ ಗುಂಡಿ, ಕೆಎಲ್‌ಇ ಶಿವಾಲಯ, ಕಣಬರಗಿಯ ಸಿದ್ಧೇಶ್ವರ ದೇವಾಲಯ, ಶಿವಾಜಿನಗರದ ವೀರಭದ್ರೇಶ್ವರ ದೇವಸ್ಥಾನ, ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ, ಶಹಾಪುರದ ಮಹಾದೇವ, ಶಾಹುನಗರ ಶಿವ ಮಂದಿರ, ಮಹಾಂತೇಶ ನಗರದ ಶಿವಾಲಯ, ಶಿವಶಕ್ತಿ ಕಾಲೊನಿ, ಸದಾಶಿವ ನಗರದ ಸದಾಶಿವ, ಸಹ್ಯಾದ್ರಿ ನಗರದ ಮಹಾಬಳೇಶ್ವರ, ಶಿವಬಸವ ನಗರದ ಪಶುಪತಿ, ಸಂಗಮೇಶ್ವರ ನಗರ ಸಂಗಮೇಶ್ವರ ಮಂದಿರ, ರಾಮತೀರ್ಥ ನಗರದ ಶಿವಾಲಯ, ಬಿ.ಕೆ.
ಕಂಗ್ರಾಳಿಯ ಕಲ್ಮೇಶ್ವರ ದೇಗುಲ, ರಾಮಲಿಂಗ ಖಿಂಡ ಗಲ್ಲಿಯ ರಾಮಲಿಂಗೇಶ್ವರ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ನಸುಕಿನ 4ರಿಂದಲೇ ಪರಮಶಿವನಿಗೆ ರುದ್ರಾಭಿಷೇಕ ಮಾಡಲಾಯಿತು. ಗರ್ಭಗುಡಿಗಳನ್ನು ವಿವಿಧ ಪುಷ್ಪ ಹಾಗೂ ಬಿಲ್ವಪತ್ರಿಗಳಿಂದ ಅಲಂಕರಿಸಿದ್ದರೆ, ಹೊರಾಂಗಣವನ್ನು ವರ್ಣರಂಜಿತ ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು.
ಬಿಲ್ವಪತ್ರಿ, ಕಾಯಿ, ಕರ್ಪೂರ, ಚೆಂಡುಹೂವು ಹಿಡಿದು ಮಹಿಳೆಯರು ಶಿವನ ಪೂಜೆಗೆ ಬಂದರು. ಕಪಿಲೇಶ್ವರ ಮಂದಿರದಲ್ಲಂತೂ ಕಿಲೋಮೀಟರ್ ಉದ್ದಕ್ಕೂ ಸರದಿ ಇತ್ತು. ರಾತ್ರಿ ಇಡೀ ಶಿವನಾಮ ಜಪ, ಶಿವಭಜನೆ, ಶಿವಸ್ತುತಿಗಳು ಸಾಂಗವಾಗಿ ನೆರವೇರಿದವು.
ಬಹುಪಾಲು ಜನ ಉಪವಾಸ ವ್ರತ ಆಚರಿಸಿದರು. ಅವರಿಗಾಗಿ ಹಣ್ಣು, ಕರ್ಜೂರ, ಕಡಲೆ- ಬೆಲ್ಲದ ಪ್ರಸಾದ ವಿತರಿಸಲಾಯಿತು.
ಮುಗಳಖೋಡ ವರದಿ: ಮಹಾಶಿವರಾತ್ರಿ, ಜಾಗರಣೆಯ ಅಂಗವಾಗಿ ಮುಗಳಖೋಡದ ಈಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಶಾಸಕ ಎಸ್.ವಿ.ಘಾಟಗೆ ಪೂಜೆಯಲ್ಲಿ ಭಾಗಿಯಾದರು. ಬೆಳಿಗ್ಗೆ 8ರಿಂದ ಸಚಿನ ಹಿರೇಮಠ ಅವರ ನೇತೃತ್ವದಲ್ಲಿ ಪೂಜೆ, ಅಭಿಷೇಕ ನೆರವೇರಿತು. ಮಹಿಳೆಯರು ವಸ್ತ್ರಧಾರಣ ಹಾಗೂ ಉಡಿತುಂಬುವ ಕಾರ್ಯಕ್ರಮ ಮಾಡಿದರು.