ಹುಬ್ಬಳ್ಳಿ: ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ವಿಶೇಷ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಐವರು ದಂತ ಚೋರರನ್ನು ವಶಕ್ಕೆ ಪಡೆದಿದ್ದಾರೆ.
ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಅರಣ್ಯ ಇಲಾಖೆಯು ಐವರನ್ನು ವಶಕ್ಕೆ ಪಡೆದಿದ್ದು, ಲಕ್ಷಾಂತರ ಮೌಲ್ಯದ ಆನೆ ದಂತದ ಕಲಾಕೃತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಲ್ಲಾಪೂರ ಮೂಲದ ಸಾತ್ ಶಹಾಜನ್ ಜಮಾದಾರ, ವಿಜಯ್ ರಾಜಾರಾಂ ಕುಂಬಾರ, ಸಾಗರ ಸುಭಾಷ ಪರಾಣಿಕ, ನಿಪ್ಪಾಣಿ ಮೂಲದ ವಿನಾಯಕ ನಾಮದೇವ ಕಾಂಬ್ಳೆ, ದಾನಜೀ ಪಾಂಡುರಂಗ ಪಾಟೀಲ ಎಂಬುವವರೇ ಬಂಧಿತ ಆರೋಪಿಗಳು. ಅಕ್ರಮವಾಗಿ ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿತರನ್ನು ಬಂಧಿಸಿ ಅವರ ವಶದಲ್ಲಿದ್ದ 384 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಅಲಂಕಾರಿಕ ಪಟ್ಟಿಗೆ, 112 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಕೆಂಪು ಹರಳು, ಇರುವ ಒಂದು ಖಡ್ಗ, 350 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಆಯತಾಕಾರದ ಪೆಟ್ಟಿಗೆ, 279 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.