Breaking News

ಶೇ.60 ಭರವಸೆಯನ್ನೂ ಈಡೇರಿಸಿಲ್ಲ: ಸಿದ್ದರಾಮಯ್ಯ ವಾಗ್ಧಾಳಿ

Spread the love

ವಿಧಾನಸಭೆ: ಬಿಜೆಪಿ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆ ಪೈಕಿ ಶೇ.60ರಷ್ಟು ಈಡೇರಿಸಿಲ್ಲ. ಹೀಗಿರುವಾಗ ರಾಜ್ಯಪಾಲರ ಕೈಲಿ ಸುಳ್ಳು ಹೇಳಿಸಿರುವುದು ನಿಜವೋ ಅಲ್ಲವೋ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಒಂದು ಲಕ್ಷ ರೂ. ಸಾಲ ಮನ್ನಾ, 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲಾ 10 ಸಾವಿರ ರೂ. ನಗದು, ಬೆಂಬಲ ಬೆಲೆಗಾಗಿ ಐದು ಸಾವಿರ ಕೋಟಿ ರೂ. ವಿಶೇಷ ನಿಧಿ ಸ್ಥಾಪನೆ, ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರೂ. ವೆಚ್ಚ ಮಾಡುವ ಸುಜಲಾಂ ಸುಫ‌ಲಾಂ ಯೋಜನೆ ಇದ್ಯಾವುದೂ ಜಾರಿಯೇ ಆಗಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು.

ಪಶು ಸಂಗೋಪನೆ ಇಲಾಖೆಯಿಂದ ಮೂರು ಸಾವಿರ ಕೋಟಿ ರೂ. ಮೊತ್ತದ ಯೋಜನೆ ಕಾಮದೇನು ಘೋಷಿಸಲಾಗಿತ್ತು. ಆದರೆ, ಇದುವರೆಗೂ ಜಾರಿಯಾಗಿಲ್ಲ ಎಂದಾಗ, ಕಾಂಗ್ರೆಸ್‌ ಸದಸ್ಯರು ಅದು ನಾಮದೇನು ಆಗಿದೆ ಎಂದು ಕಿಚಾಯಿಸಿದರು.

ಹೌದು, ತಿರುಪತಿ ತಿಮ್ಮಪ್ಪನ ನಾಮ ಅಂತಾರೆ ನಮ್ಮ ಕಡೆ. ಇತ್ತೀಚೆಗೆ ನಾನು ಏನೇ ಮಾತನಾಡಿದರೂ ವಿವಾದ ಮಾಡಲಾಗುತ್ತದೆ. ಇದಕ್ಕೂ ಬೇಕಾದರೆ ತಿರುಪತಿ ತಿಮ್ಮಪ್ಪನಿಗೆ ಅವಮಾನ ಮಾಡಿದರು ಎಂದೂ ಹೇಳಬಹುದು ಎಂದು ಚಟಾಕಿ ಹಾರಿಸಿದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ಕಾಂಗ್ರೆಸ್‌ 2013ರಲ್ಲಿ ಪ್ರಣಾಳಿಕೆಯಲ್ಲಿ 165 ಭರವಸೆ ನೀಡಿತ್ತು. ಆ ಪೈಕಿ 158 ಈಡೇರಿಸಿತು. ಜತೆಗೆ ಹೊಸದಾಗಿ 30 ಯೋಜನೆ ಜಾರಿಗೊಳಿಸಿತು. ಇದರ ಬಗ್ಗೆ ನಾನು ಬಹಿರಂಗ ಚರ್ಚೆಗೂ ಸಿದ್ಧ ಎಂದು ಹೇಳಿದರು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಸಿ.ಟಿ.ರವಿ ಸೇರಿ ಹಲವರು ಡಬಲ್‌ ಎಂಜಿನ್‌ ಸರ್ಕಾರ, ಸಾಧನೆ ಎಂದೆಲ್ಲಾ ಮಾತನಾಡಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ರಸಗೊಬ್ಬರ ಸಬ್ಸಿಡಿಗೆ 50 ಸಾವಿರ ಕೋಟಿ ಕಡಿತ ಮಾಡಲಾಗಿದೆ. ನರೇಗಾ ಯೋಜನೆಗೆ 29 ಸಾವಿರ ಕೋಟಿ ರೂ. ಕಡಿತ ಮಾಡಲಾಗಿದೆ. ಇದು ಅಭಿವೃದ್ಧಿಯ ಸಂಕೇತವೇ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ