Breaking News

ರೇಣುಕಾ ಸನ್ನಿಧಿಯಲ್ಲಿ ಭಕ್ತಿ ಹೊಳೆ- ಮುಗಿಲು ಮುಟ್ಟಿದ ಜೈಕಾರ

Spread the love

ವದತ್ತಿ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಕ್ತಿಯ ಹೊಳೆ ಹರಿಯಿತು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಜಗದಂಬಾ ಸನ್ನಿಧಿಯಲ್ಲಿ ಭಾರತ ಹುಣ್ಣಿಮೆ ಸಂಕ್ಷಿಪ್ತವಾಗಿ ಆಚರಿಸಲಾಗಿತ್ತು. ಈ ಬಾರಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಅಪಾರ ಜನ ಸೇರಿದರು.

 

ರೇಣುಕಾದೇವಿ ಸನ್ನಿಧಿಗೆ ಬಂದು ಪರಡಿ ತುಂಬುವುದು ಭಾರತ ಹುಣ್ಣಿಮೆಯ ಸಂಪ್ರದಾಯಗಳಲ್ಲಿ ಒಂದು. ಅದರಂತೆ, ಭಾನುವಾರ ಕೂಡ ಅಪಾರ ಭಕ್ತರು ಬೆಟ್ಟದಲ್ಲೇ ಪುಣ್ಯಸ್ನಾನ ಮಾಡಿ, ನೈವೇದ್ಯ ಸಿದ್ಧಪಡಿಸಿ ಪರಡಿ ತುಂಬಿದರು.

ಕರಿಗಡಬು, ಹೋಳಿಗೆ, ಕರ್ಚಿಕಾಯಿ, ಅನ್ನ-ಸಾರು, ಪಲ್ಯ, ವಡೆ, ಭಜ್ಜಿ, ಸಂಡಿಗೆ, ಹಪ್ಪಳ, ನೆಲಗಡಲೆ- ಬೆಲ್ಲ… ಹೀಗೆ ವಿವಿಧ ನಮೂನೆಯ ಪದಾರ್ಥಗಳನ್ನು ದೇವಿಗೆ ಅರ್ಪಿಸುವುದು ವಾಡಿಕೆ. ಬಿದಿರ ಬುಟ್ಟಿಯಿಂದ ಮಾಡಿದ ಪರಡಿಯಲ್ಲಿ ದೇವಿಯ ಪುಟ್ಟ ಮೂರ್ತಿ ಇಟ್ಟು ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ ನಂತರ ಪರಡಿಯಲ್ಲಿ ಈ ಎಲ್ಲ ತಿನಿಸುಗಳನ್ನೂ ತುಂಬಿ ನೈವೇದ್ಯ ಮಾಡಿದರು.

ಪ್ರತಿ ಊರಿನಿಂದಲೂ ಹಲವರು ಈ ರೀತಿಯ ಪರಡಿಯಲ್ಲಿ ದೇವಿ ಮೂರ್ತಿಗಳನ್ನು ಹೊತ್ತು ತರುವುದು ಪದ್ಧತಿ. ಈ ಮೂರ್ತಿಗಳಿಗೆ ಇಲ್ಲಿ ಪೂಜೆ, ನೈವೇದ್ಯ ಮಾಡಿ ನಂತರ ರೇಣುಕಾದೇವಿಯ ಸನ್ನಿಧಿಯಲ್ಲಿ ಉಡಿ ತುಂಬಿದರು. ಯಕ್ಕಯ್ಯ, ಜೋಗಯ್ಯ ಎಂದು ಜೋಗಾಡುತ್ತ ಗುಡ್ಡದಲ್ಲಿ ಯಾತ್ರೆ ಮಾಡಿದರು.

ಹಲವು ಮಹಿಳೆಯರು, ಮಕ್ಕಳು, ಹಿರಿಯರು ಕೂಡ ದೀರ್ಘದಂಡ ನಮಸ್ಕಾರ ಹಾಕಿದರು. ತಮ್ಮ ಇಷ್ಟಾರ್ಥ ಪೂರೈಸಿದರೆ, ಕಷ್ಟ- ಕಾರ್ಪಣ್ಯಗಳನ್ನು ಪರಿಹಾರ ಮಾಡಿದ ಬಳಿಕ ಈ ರೀತಿ ದೀರ್ಘದಂಡ ನಮಸ್ಕಾರ ಹಾಕುವುದು ರೂಢಿ. ಈ ರೀತಿ ದೀರ್ಘದಂಡ ನಮಸ್ಕಾರ ಹಾಕುವವರ ಕೈಯಲ್ಲಿ ಊರಲು ಕೊಡುವ ಊರುಗೋಲುಗಳನ್ನೇ ಟ್ರ್ಯಾಕ್ಟರ್‌ನಲ್ಲಿ ಲೋಡ್‌ಗಟ್ಟಲೇ ತರಲಾಗಿತ್ತು.

ಕಳೆದುಹೋದವರು: ಜನಸಂದಣಿಯಲ್ಲಿ ತಪ್ಪಿಸಿಕೊಂಡ ಮಕ್ಕಳು, ಹಿರಿಯರಿಗಾಗಿ ಪದೇಪದೇ ಕರೆ ಮಾಡಲಾಗುತ್ತಿತ್ತು. ಈ ರೀತಿಯ ಬಳಗದಿಂದ ತಪ್ಪಿಸಿಕೊಂಡವರ ನೆರವಿಗಾಗಿಯೇ ಪೊಲೀಸ್‌ ಚೌಕಿ ತೆರೆಯಲಾಗಿತ್ತು. ಅಲ್ಲಿನ ಸಹಾಯ ಕೇಂದ್ರದಲ್ಲಿ ಕುಳಿತ ಸಿಬ್ಬಂದಿ ಮೈಕುಗಳಲ್ಲಿ ಪದೇಪದೇ ಕೂಗಿ ತಪ್ಪಿಸಿಕೊಂಡವರು ಎಲ್ಲಿಗೆ ಬರಬೇಕು ಎಂದು ಹೇಳುತ್ತಲೇ ಇದ್ದರು. ಬೆಳಿಗ್ಗೆ 8ಕ್ಕೆ ಆರಂಭವಾದ ಈ ಸಹಾಯ ಕೇಂದ್ರದ ಲೋಡ್‌ಸ್ಪೀಕರ್‌ ರಾತ್ರಿ 8ರವರೆಗೆ ಕೂಗುತ್ತಲೇ ಇತ್ತು.

ಜಾತ್ರೆಯ ಪ್ರತಿ ಚಲನ-ವಲನಗಳ ಮೇಲೆ ಯಲ್ಲಮ್ಮ ದೇವಸ್ಥಾನ ನಿಗಾ ಇರಿಸಲು 40 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು.

ದೂರದ ಊರುಗಳಿಗೆ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‍ ಸೌಕರ್ಯ ಕಲ್ಪಿಸಿತ್ತು. ಜತೆಗೆ, ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯಿಂದಲೂ ಹೆಚ್ಚಿನ ಬಸ್‍ಗಳೂ ಬಂದಿದ್ದವು.


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ