Breaking News

ಬೆಳಗಾವಿ: ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ನಾಳೆ

Spread the love

ಬೆಳಗಾವಿ: ‘ಸಮರ್ಥನಂ’ ಅಂಗವಿಕಲರ ಸಂಸ್ಥೆ ಆಯೋಜಿಸಿದ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿ ಹಾಗೂ ‘ಪ್ರಜಾವಾಣಿ’ ಅಮೃತ ಮಹೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಇಲ್ಲಿನ ಆಟೊ ನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಫೆ.5ರಿಂದ 9ರವರೆಗೆ ಟಿ-20 ಲೀಗ್‌ ಪಂದ್ಯಗಳು ನಡೆಯಲಿವೆ.

 

ದೇಶದ ಏಳು ನಗರಗಳಲ್ಲಿ ಈ ಲೀಗ್‌ ಪಂದ್ಯಗಳು ನಡೆಯಲಿವೆ. ಆ ಪೈಕಿ ‘ಬಿ’ ಗುಂಪಿನ 10 ಪಂದ್ಯಗಳನ್ನು ಬೆಳಗಾವಿಯಲ್ಲಿ ಅಯೋಜಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ತಂಡಗಳ ಆಟಗಾರರು ಶುಕ್ರವಾರವೇ ಬೆಳಗಾವಿ ನಗರಕ್ಕೆ ಬಂದು ತಂಗಿದರು.

ಪರಿಶೀಲನೆ: ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಕಿವಡಸಣ್ಣವರ, ಬೆಳಗಾವಿ ಶಾಖೆಯ ಮುಖ್ಯಸ್ಥ ಎಂ.ಜಿ.ಅರುಣಕುಮಾರ್ ಮತ್ತಿತರರು ಶುಕ್ರವಾರ ಕ್ರಿಕೆಟ್‌ ಮೈದಾನ, ಪೆವಿಲಿಯನ್‌ಗಳನ್ನು ಪರಿಶೀಲಿಸಿದರು. ಬೌಂಡ್ರಿಮ್ಯಾನ್‌ ಸಹಾಯದೊಂದಿಗೆ ಪಿಚ್‌ ಮಾರ್ಕಿಂಗ್‌ ಮಾಡಿಸಿದರು.

ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿ ಆಯೋಜಿಸಲಾಗಿದೆ. ಅಂಧರು ಕೂಡ ಹೇಗೆ ಕ್ರಿಕೆಟ್‌ ಆಡಬಲ್ಲರು ಎಂಬ ಹಂಬಲ ಹಲವರಲ್ಲಿದೆ. ಹೀಗಾಗಿ, ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚುವ ನಿರೀಕ್ಷೆ ಇದೆ. ಇದಕ್ಕೆ ತಕ್ಕನಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಸಿದ್ಧತೆ ಮಾಡಲಾಗಿದೆ. ಪ್ರೇಕ್ಷಕರಿಗೆ ಕುರ್ಚಿ ಹಾಗೂ ನೆರಳಿನ ವ್ಯವಸ್ಥೆ ಇದೆ. ಅಂತರರಾಷ್ಟ್ರೀಯ ಮಟ್ಟದ ಮೈದಾನದಲ್ಲಿ, ಹುಲ್ಲುಹಾಸಿನ ಮೇಲೆ ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ನಾಲ್ವರು ಅಂತರರಾಷ್ಟ್ರೀಯ ಆಟಗಾರರು: ಬೆಳಗಾವಿಯಲ್ಲಿ ನಡೆಯುತ್ತಿರುವ ಟಿ-20 ಪಂದ್ಯಗಳಲ್ಲಿ ನಾಲ್ವರು ಭಾರತ ತಂಡದ ಆಟಗಾರರೂ ‍ಪಾಲ್ಗೊಳ್ಳಲಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವಿ ಆಟಗಾರರು ಭಾಗಿಯಾದ ಕಾರಣ ಈ ಬಾರಿ ಪಂದ್ಯಗಳಿಗೆ ಹೆಚ್ಚಿನ ಹುಮ್ಮಸ್ಸು ಬಂದಿದೆ.

ರಾಮನಗರದವರಾದ ಪ್ರಕಾಶ ಜಯರಾಮಯ್ಯ, ಚಿಕ್ಕಮಗಳೂರಿನ ಸುನೀಲ ರಮೇಶ, ಗಂಗಾವತಿಯ ಲೋಕೇಶ, ಪಶ್ಚಿಮ ಬಂಗಾಳ ರಾಜ್ಯದ ಆಟಗಾರ ಸುವೇಂದು ಮೆಹ್ತಾ ಬೇರೆಬೇರೆ ದೇಶಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಸಾಧಕರು.

ಅಲ್ಲದೇ, ಬೆಳಗಾವಿಯವರೇ ಆದ ಬಸಪ್ಪ ಒಡ್ಡಗೋಳ 2018ರಲ್ಲಿ ಏಕದಿನ ಪಂದ್ಯಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ಬಸವರಾಜು ಕೂಡ ರಾಜ್ಯ ತಂಡದ ಸದಸ್ಯ.

ಜತೆಗೆ, ಎರ್ನಾಕುಲಂ ಕ್ರಿಕೆಟ್‌ ಬೋರ್ಡ್‌ನಿಂದ ಅಂಪೈರ್‌ಗಳನ್ನು ಕರೆಸಲಾಗುತ್ತಿದೆ. ಸ್ಕೋರರ್‌ಗಳು ಬೆಳಗಾವಿಯವರೇ ಆಗಿದ್ದು ಕೆಎಸ್‌ಸಿಎನಿಂದ ನಿಯೋಜನೆಗೊಂಡಿದ್ದಾರೆ.

*

ಪ್ರತಿ ದಿನ 2 ಮ್ಯಾಚ್‌

ಪ್ರತಿ ದಿನ ಎರಡು ಮ್ಯಾಚ್‌ಗಳು ನಡೆಯಲಿದ್ದು, ಬ್ರೇಕ್‌ ಅವಧಿಯೂ ಸೇರಿ 95 ನಿಮಿಷಗಳ ಒಂದು ಇನ್ನಿಂಗ್ಸ್‌ ಇರಲಿದೆ. ಈ ರೀತಿಯ ನಾಲ್ಕು ಇನ್ನಿಂಗ್ಸ್‌ ದಿನವೂ ನಡೆಯಲಿವೆ.

ಬೆಳಿಗ್ಗೆ 9ರಿಂದ ಮೊದಲ ಪಂದ್ಯ ಹಾಗೂ ಮಧ್ಯಾಹ್ನ 1ರಿಂದ ಎರಡನೇ ಪಂದ್ಯ ನಡೆಯಲಿದೆ. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಆಯಾ ಮ್ಯಾಚ್‌ಗಳು ಮುಗಿದ ತಕ್ಷಣವೇ ವಿತರಿಸಲಾಗುವುದು.

ಕ್ರಿಕ್‌ ಹಿರೋಸ್‌ (crick heroes) ಆಯಪ್‌ನಲ್ಲಿ ಈ ಕ್ರಿಕೆಟ್‌ನ ಸ್ಕೋರ್‌ಗಳನ್ನು ಲೈವ್ ನೋಡಬಹುದು.

*

ಕ್ರಿಕೆಟ್‌ ಉದ್ಘಾಟನೆ ಇಂದು‌

ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಸಭಾಂಗಣದಲ್ಲಿ ಫೆ.4ರಂದು ಸಂಜೆ 5.30ಕ್ಕೆ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದೆ.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅನಿಲ ಬೆನಕೆ, ಕ್ರಿಕೆಟಿಗ ಸೋಮಶೇಖರ ಸಿರಗುಪ್ಪಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಬುಡಾ ಅಧ್ಯಕ್ಷ ಸಂಜಯ ಮಧುಕರ ಬೆಳಗಾಂವಕರ್, ಕೆಎಸ್‌ಸಿಎ ಧಾರವಾಡ ವಲಯ ಸಂಚಾಲಕ ನಿಖಿಲ ಭುಸದ್‌, ಮಾಹೇಶ್ವರ ಅಂಧ ಮಕ್ಕಳ ಶಾಲೆಯ ಗೌರವ ಕಾರ್ಯದರ್ಶಿ ಆನಂದ ಜೋಶಿ, ಅಂಗವಿಕಲರ ಅಭಿವೃದ್ಧಿ ಅಧಿಕಾರಿ ನಾಮದೇವ ಬಿಲ್ಕರ್, ವಿವಿಧ ಸಂಸ್ಥೆಗಳ ಮುಖಂಡರಾದ ಲಲಿತಾ ಪಿ. ವಡ್ಲಮನಿ, ಮಹಾಂತೇಶ ಪಾಟೀಲ, ವೀರೇಶ ಜಿ. ಕಿವಡಸಣ್ಣವರ, ವೈ.ಉದಯಕುಮಾರ್‌, ಪ್ರಜಾವಾಣಿ ಜಿಲ್ಲಾ ವರದಿಗಾರ ಸಂತೋಷ ಈ. ಚಿನಗುಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ