ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 130ರಿಂದ 140 ಸ್ಥಾನಗಳನ್ನು ಪಡೆಯಲಿದೆ. ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ (ಬಿಜೆಪಿ) 130ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ.
ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ‘ನಾನೇ ಸಿಎಂ’ ಎಂಬ ಸಂಘರ್ಷ ಶುರುವಾಗಿದೆ. ಕಾಂಗ್ರೆಸ್ ನಾಯಕ ಯಾರು? ರಾಹುಲ್ ಗಾಂಧಿ ಒಬ್ಬ ನಾಯಕರೇ ಎಂದು ಪ್ರಶ್ನಿಸಿದರು.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯನ್ನಾಗಿ ಕೆ.ಅಣ್ಣಾಮಲೈ ಅವರನ್ನು ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಎಸ್‌ವೈ, ಧರ್ಮೇಂದ್ರ ಪ್ರಧಾನ್ ಅತ್ಯಂತ ಹಿರಿಯ ನಾಯಕ. ಅಣ್ಣಾಮಲೈ ಕೂಡ ಸಮರ್ಥರಿದ್ದಾರೆ. ಚುನಾವಣೆ ಗೆಲ್ಲಲು ನಮ್ಮ ಪಕ್ಷಕ್ಕೆ ಸಹಕಾರಿಯಾಗಲಿದ್ದಾರೆ ಎಂದರು.