ಧಾರವಾಡ: ರಾಜ್ಯದ 2023-24ನೇ ಸಾಲಿನ ಬಜೆಟ್ ರೈತ ಪರ ಆಗಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರ ದ ಕೃಷಿ ವಿವಿ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿ ವಿವಿಯ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಹಾಗೂ ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರೆಗೂ ರೈತರ ಪರ ಕೆಲಸ ಮಾಡುತ್ತೇನೆ. ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಲೆಂದೇ “ವಿದ್ಯಾಸಿರಿ’ ಯೋಜನೆ ಆರಂಭಿಸಿದೆ. ರಾಜ್ಯದ 51ಲಕ್ಷ ರೈತರ ಖಾತೆಗಳಿಗೆ 390 ಕೋಟಿ ರೂ.ಗಳನ್ನು “ರೈತ ಶಕ್ತಿ ಯೋಜನೆ’ಯಡಿ ಬಿಡುಗಡೆ ಮಾಡಿದ್ದೇನೆ. ಒಟ್ಟು 500 ಕೋಟಿ ರೂ.ಗಳನ್ನು ಈ ಯೋಜನೆಗೆ ಕಾಯ್ದಿರಿಸಿದ್ದೇನೆ.
“ವಿದ್ಯಾನಿಧಿ’ ಯೋಜನೆಯಡಿ 11ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂ. ನೀಡಲಾಗಿದೆ. ಇನ್ನು ಹೊಸದಾಗಿ ಯಾರು ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆಯೋ ಅವರಿಗೂ ಈ ಯೋಜನೆ ಅನ್ವಯವಾಗಲಿದೆ. ಈ ಬಾರಿಯ ಬಜೆಟ್‌ನಲ್ಲೂ ರೈತಪರ ಯೋಜನೆಗಳಿಗೆ ಒತ್ತು ನೀಡುವುದಾಗಿ ರೈತ ಸಮೂಹಕ್ಕೆ ಭರವಸೆ ನೀಡಿದರು.