Breaking News

ಬೈಪಾಸ್ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಈಗ ವಿದ್ಯುತ್ ಕಂಬಗಳೇ ಅಡ್ಡಿ

Spread the love

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಈಗ ವಿದ್ಯುತ್ ಕಂಬಗಳೇ ಅಡ್ಡಿಯಾಗಿವೆ. ಎರಡು ಇಲಾಖೆಗಳ ಅಧಿಕಾರಿಗಳ ನಡುವಿನ ತಿಕ್ಕಾಟದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಚ್ಚರಿಯೆಂದರೆ, ವಿದ್ಯುತ್‌ ಕಂಬಗಳು ರಸ್ತೆ ಮಧ್ಯದಲ್ಲೇ ಬರುತ್ತವೆ ಎಂದು ಗೊತ್ತಿದ್ದರೂ ರಸ್ತೆ ಸುಧಾರಣಾ ಕಾರ್ಯ ಶುರು ಮಾಡಲಾಗಿದೆ.

 

‘ತಂದೆ- ತಾಯಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತು ಈಗ ಪಟ್ಟಣದ ಜನರಿಗೆ ಅನ್ವಯಿಸುತ್ತಿದೆ.

ಎಂ.ಕೆ.ಹುಬ್ಬಳ್ಳಿಯ ಬೈಪಾಸ್ ರಸ್ತೆ ಹಲವು ವರ್ಷಗಳಿಂದ ಹಾಳಾಗಿ, ಸಂಚಾರ ಸಮಸ್ಯೆ ಎದುರಾಗಿತ್ತು. ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕ ಮಹಾಂತೇಶ ದೊಡಗೌಡರ ಅವರು ₹1.75 ಕೋಟಿ ಅನುದಾನದಲ್ಲಿ ಮಂಜೂರು ಮಾಡಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಿದ್ದಾರೆ.

ಮೊದಲಿದ್ದ ರಸ್ತೆಗಿಂತ ಒಂದಿಷ್ಟು ವಿಸ್ತಿರಿಸಿ, ನೀರು ಸರಾಗವಾಗಿ ಹರಿಯಲು ಅನುಕೂಲವಾಗುವ ದೃಷ್ಟಿಯಿಂದ ರಸ್ತೆಯ ಎರಡೂ ಬದಿಯಲ್ಲಿ ಸಿಮೆಂಟ್‌ ಚರಂಡಿ ನಿರ್ಮಿಸಲಾಗಿದೆ. ಇನ್ನುಳಿದ ಅಭಿವೃದ್ಧಿ ಕಾರ್ಯವು ಪ್ರಗತಿಯಲ್ಲಿದೆ.

ಆದರೆ, ರಸ್ತೆಯ ಒಂದು ಬದಿಯಲಿದ್ದ ನಾಲ್ಕು ವಿದ್ಯುತ್ ಕಂಬಗಳು ಚರಂಡಿ ನಿರ್ಮಾಣದಿಂದ ರಸ್ತೆಯ ನಡುವೆ ನಿಂತಿವೆ. ಹಾಗೇಯೇ ಕಾಮಗಾರಿ ಮುಂದುವರಿಸಲಾಗಿದೆ. ವೇಗವಾಗಿ ಬರುವ ವಾಹನಗಳು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಇದರ ಕನಿಷ್ಠ ಕಾಳಜಿಯೂ ಇಲ್ಲದೇ ಕೆಲಸ ಮುಂದುವರಿಸಿದ್ದು, ಜನರನ್ನು ಕೆರಳಿಸಿದೆ.

ಉಭಯ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆ ಹಾಗೂ ತಿಕ್ಕಾಟದ ನಡುವೆ ಪ್ರಯಾಣಿಕರು ಪ್ರಾಯಾಸ ಪಡುವಂತಾಗಿದೆ. ನಡುರಸ್ತೆಯಲ್ಲಿ ವಿದ್ಯುತ್ ಕಂಬ ಇಟ್ಟು ಡಾಂಬರೀಕರಣ ಮಾಡಿದರೆ, ಅಪಾಯ ಸಂಭವಿಸುವ ಜತೆಗೆ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯ ಉಪಯೋಗ ಇಲ್ಲದಂತಾಗುತ್ತದೆ. ತಕ್ಷಣವೇ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ನಂತರ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

 


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ