Breaking News
Home / Uncategorized / ತಡರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮನ.. ಸಿಎಂ, ಬಿಜೆಪಿ ನಾಯಕರಿಂದ ಸ್ವಾಗತ

ತಡರಾತ್ರಿ ಹುಬ್ಬಳ್ಳಿಗೆ ಅಮಿತ್ ಶಾ ಆಗಮನ.. ಸಿಎಂ, ಬಿಜೆಪಿ ನಾಯಕರಿಂದ ಸ್ವಾಗತ

Spread the love

ಹುಬ್ಬಳ್ಳಿ/ಧಾರವಾಡ/ಬೆಳಗಾವಿ: ವಿಶೇಷ ವಿಮಾನದ ಮೂಲಕ ದೆಹಲಿಯಿಂದ ವಾಣಿಜ್ಯನಗರಿ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದರು.

ತಡರಾತ್ರಿ ನಗರಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ವಾಗತ ಕೋರಿದರು.

ಇಲ್ಲಿನ ಡೆನಿಸನ್ ಹೋಟೆಲ್​ನಲ್ಲಿ ಅಮಿತ್ ಶಾ ಅವರು ವಾಸ್ತವ್ಯ ಹೂಡಿದ್ದು ಹುಬ್ಬಳ್ಳಿ, ಧಾರವಾಡ, ಕುಂದಗೋಳ ಮತ್ತು ಬೆಳಗಾವಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಇತ್ತೀಚಿನ ರಾಜ್ಯ ಪ್ರವಾಸದ ಬೆನ್ನಲ್ಲೇ ಅಮಿತ್ ಶಾ ಆಗಮನ ರಾಜ್ಯ ಬಿಜೆಪಿಗೆ ಬೂಸ್ಟರ್ ಡೋಸ್ ನೀಡಿದಂತಾಗುತ್ತಿದೆ.

ಅಮಿತ್ ಶಾ ಕಾರ್ಯಕ್ರಮ ವಿವರ: ಹುಬ್ಬಳ್ಳಿಯಲ್ಲಿ ಇಂದು ಬೆಳಗ್ಗೆ ಕೆಎಲ್‌ಇ ಕಾರ್ಯಕ್ರಮ ಮತ್ತು ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಳಿಕ ಧಾರವಾಡದಲ್ಲಿ ನೂತನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಕುಂದಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಆ ಬಳಿಕ ಬೆಳಗಾವಿಗೆ ತೆರಳಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ ಬದಲಾವಣೆ: ಅಮಿತ್ ಶಾ ಭಾಗಿಯಾಗಲಿದ್ದ ಧಾರವಾಡ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆಯಾಗಿದೆ. ಕ್ಯಾಂಪಸ್ ಭೂಮಿ ಪೂಜೆ ಬಳಿಕ ವೇದಿಕೆ‌ ಕಾರ್ಯಕ್ರಮ ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಮೊದಲು ವೇದಿಕೆ ಕಾರ್ಯಕ್ರಮ ಕೃಷಿ ವಿವಿ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈಗ ಏಕಾಏಕಿ ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದು, ಅಲ್ಲಿ 1350 ಜನರಿಗೆ ಮಾತ್ರ ಅವಕಾಶ ಸಿಗಲಿದೆ. ಸಿಆರ್​​ಪಿಎಫ್ ತಂಡ ಸ್ಥಳಕ್ಕಾಗಮಿಸಿ ಭದ್ರತೆ ಪರಿಶೀಲಿಸಿತು.

ಹುಬ್ಬಳ್ಳಿಗೆ ಅಮಿತ್ ಶಾ ಆಗಮನ
ಹೆಲಿಪ್ಯಾಡ್ ನಿರ್ಮಾಣ: ಮಧ್ಯಾಹ್ನ 12.30 ರ ಸುಮಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ. ಎತ್ತಿನಗುಡ್ಡದ ಸರ್ಕಾರಿ ಶಾಲಾ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್‌ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ ನಂತರ ಅಮಿತ್ ಶಾ ಅವರು ಅಲ್ಲಿಂದ ನೇರವಾಗಿ ಹೆಲಿಕ್ಯಾಪ್ಟರ್ ಮೂಲಕ ಕುಂದಗೋಳಕ್ಕೆ ತೆರಳಲಿದ್ದಾರೆ. ಹೆಲಿಕಾಪ್ಟರ್ ನಿಲುಗಡೆಗಾಗಿ ಎತ್ತಿನಗುಡ್ಡದ ಸರ್ಕಾರಿ ಶಾಲಾ ಆವರಣದಲ್ಲಿ ಟಾರ್ ಹಾಕಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.

ಜೋಶಿ ಪರಿಶೀಲನೆ: ಧಾರವಾಡಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಧಾರವಾಡದ ಕೃಷಿ ವಿವಿ ಮೈದಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು. ಕೇಂದ್ರ ಸಚಿವ ಜೋಶಿ ಅವರಿಗೆ ಶಾಸಕ ಅಮೃತ ದೇಸಾಯಿ, ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಡಿಸಿ ಗುರುದತ್ ಹೆಗಡೆ, ಹುಧಾ ಕಮಿಷನರ್ ರಮನಗುಪ್ತ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ದರು.

ಬಳಿಕ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗ್ಗೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರಲಿದ್ದಾರೆ. ನಂತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಅರ್ಧ ಗಂಟೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿಂದ ನೇರವಾಗಿ ಕುಂದಗೋಳಕ್ಕೆ ಹೋಗಲಿದ್ದಾರೆ. ನಂತರ ಕಿತ್ತೂರು ಮೂಲಕ ಬೆಳಗಾವಿ ಪ್ರವಾಸ ಮಾಡಲಿದ್ದಾರೆ. ಇದು ಒಂದು ಪ್ರತಿಷ್ಠಿತ ಕ್ಯಾಂಪಸ್. ಗುಜರಾತ್ ವಿವಿಯವರು ಇದನ್ನು ವಿಶ್ವದರ್ಜೆಯ ವಿವಿ ಕ್ಯಾಂಪಸ್ ಮಾಡಲಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಗುಜರಾತ್ ವಿವಿಯವರಿಗೆ ಧನ್ಯವಾದ ಹೇಳ್ತೀನಿ. ದೊಡ್ಡ ಪ್ರಮಾಣದ ಉದ್ಘಾಟನೆಗೆ ಮಾಡುವ ತೀರ್ಮಾನ ಮಾಡಿದ್ದೇವೆ. ಈಗ ಸಮಯದ ಅಭಾವದಿಂದ ವೇದಿಕೆ ಕಾರ್ಯಕ್ರಮ ಸ್ಥಳ ಬದಲಾವಣೆ ಮಾಡಲಾಗಿದೆ. ಈಗ ಸದ್ಯಕ್ಕೆ ಸಣ್ಣ ಹಾಲ್​​ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಯಾವುದು ಶಂಕುಸ್ಥಾಪನೆ ಮಾಡಿರುತ್ತೆ, ಅದನ್ನೇ ಉದ್ಘಾಟನೆ ಸಹ ಮಾಡಿದ್ದೇವೆ.‌ ಒಂದು ವರ್ಷದಲ್ಲಿ ಇದನ್ನು ಉದ್ಘಾಟನೆ ಮಾಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್ ಆರಂಭಿಸಲು ಡಿಸಿಗೆ ಸೂಚನೆ ನೀಡಿದ್ದೇನೆ ಎಂದರು.


Spread the love

About Laxminews 24x7

Check Also

ಪಕ್ಕದಲ್ಲೇ ಕೃಷ್ಣೆ ಹರಿದರೂ ನೀರಿಗೆ ಬರ!

Spread the loveಮುಳಬಾಗಿಲು: ರಾಜ್ಯದ ಕಟ್ಟಕಡೆಯ ಹಾಗೂ ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಮುಳಬಾಗಿಲು ತಾಲ್ಲೂಕು ಬಯಲು ಪ್ರದೇಶವಾಗಿದೆ. ಯಾವುದೇ ಶಾಶ್ವತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ