ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವವರು. ಒಂದರ ಹಿಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಕೇಸುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ.
ಆದರೆ ನಟನೆ ವಿಷಯಕ್ಕೆ ಬಂದಾಗ ಆಕೆಯನ್ನು ಮೀರಿಸುವ ನಟಿ ಬಾಲಿವುಡ್‌ನಲ್ಲಿ ಮತ್ತೊಬ್ಬರಿಲ್ಲ.
ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡುವ ಕಂಗನಾ, ಪಾತ್ರವೇ ತಾವಾಗಿಬಿಡುತ್ತಾರೆ. ಕಂಗನಾರನ್ನು ದ್ವೇಷಿಸುವವರು ಸಹ ಆಕೆಯ ನಟನೆಗೆ ಮಾರು ಹೋಗದೇ ಬೇರೆ ವಿಧಿಯಿಲ್ಲ.
ನಟನೆಗೆ ಎರಡು ರಾಷ್ಟ್ರಪ್ರಶಸ್ತಿ ಪಡೆದಿರುವ ಕಂಗನಾ ಇದೀಗ ಮತ್ತೊಂದು ರಾಷ್ಟ್ರಪ್ರಶಸ್ತಿ ಮೇಲೆ ಕಣ್ಣು ಹಾಕಿದಂತೆ ಕಾಣುತ್ತಿದೆ. ಭಾರತದ ಪ್ರಮುಖ ರಾಜಕೀಯ ಘಟನೆ ತುರ್ತು ಪರಿಸ್ಥಿತಿ ಕುರಿತ ಸಿನಿಮಾವನ್ನು ಕಂಗನಾ ರನೌತ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದು ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುವ ಕಂಗನಾ, ಈ ಬಾರಿಯಂತೂ ಈ ಸಿನಿಮಾಕ್ಕಾಗಿ ತಮ್ಮ ಆಸ್ತಿಯನ್ನು ಸಹ ಅಡವಿಟ್ಟಿದ್ದಾರಂತೆ.
‘ಎಮರ್ಜೆನ್ಸಿ’ ಸಿನಿಮಾವನ್ನು ಕಂಗನಾ ರನೌತ್ ನಿರ್ದೇಶನ ಮಾಡಿ, ಸಹ ನಿರ್ಮಾಣವೂ ಮಾಡಿದ್ದಾರೆ. ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೆ ಮುಗಿದಿದ್ದು, ಶೂಟಿಂಗ್ ಸೆಟ್‌ನ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ ರನೌತ್ ಶೂಟಿಂಗ್ ಮುಗಿದಿರುವ ವಿಷಯ ಹಂಚಿಕೊಂಡಿದ್ದಾರೆ ಜೊತೆಗೆ ಈ ಸಿನಿಮಾ ಮುಗಿಸಲು ಬಹಳ ಕಷ್ಟಪಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ.