ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಮತ್ತೆ ಸರ್ವರ್ ಭೂತ ವಕ್ಕರಿಸಿದೆ. ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ರಾಜ್ಯಾದ್ಯಂತ ಕಾರ್ಡ್‌ದಾರರು ಪರದಾಡುವಂತಾಗಿದೆ. ಯೋಜನೆಗೆ ‘ಸರ್ವರ್ ಡೌನ್’ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೆಣಗಾಡುವಂತಾಗಿದೆ.
ಇದರಿಂದಾಗಿ ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಡ್‌ದಾರರು ಹೋಗಿ ಬರುವಂತಾಗಿದೆ. 2022ರ ಸೆ.15ರಿಂದ 10 ದಿನವರೆಗೆ ಸರ್ವರ್ ಡೌನ್ ಗುಮ್ಮ ಕಾಡಿತ್ತು. ಈಗ ಮತ್ತೆ ಜನಪ್ರಿಯ ಯೋಜನೆಗೆ ನೂರೆಂಟು ತೊಂದರೆಯಾಗುತ್ತಿದೆ. ಸರ್ವರ್ ಮೇಲ್ವಿಚಾರಣೆ ನಡೆಸುವವರು ಇಲಾಖೆಯಿಂದ ಸಮರ್ಪಕವಾಗಿ ಹಣ ಪಾವತಿಸದಿದ್ದರೆ ಬೇಕಂತಲೇ ಕೆಲವೊಮ್ಮೆ ಸರ್ವರ್ ಡೌನ್ ಮಾಡುತ್ತಿರುವ ಬಗ್ಗೆಯೂ ಗಂಭೀರ ಆರೋಪವಿದೆ.
ರಾಜ್ಯದಲ್ಲಿ 1,15,79,081 ಬಿಪಿಎಲ್, 23,87,956 ಎಪಿಎಲ್ ಹಾಗೂ 10,90,563 ಅಂತ್ಯೋದಯ ಸೇರಿ ಒಟ್ಟು 1,50,57,600 ಕಾರ್ಡ್‌ಗಳಿವೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ಯೋಜನೆಯಡಿ ಈ ಎಲ್ಲ ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿಯಲ್ಲಿ ಸದ್ಯ ಹಳೆಯ ಸರ್ವರ್ ಅಳವಡಿಸಲಾಗಿದೆ. ಮತ್ತೊಂದು ಸರ್ವರ್ ಅಳವಡಿಕೆಗೆ ಸರ್ಕಾರ ಈಗಾಗಲೆ ಟೆಂಡರ್ ಕರೆದರೂ ಇನ್ನೂ ಪ್ರಕ್ರಿಯೆಗಳು ಮುಗಿದಿಲ್ಲ. ಇದರಿಂದ ಮೂರ್ನಾಲ್ಕು ತಿಂಗಳಿಗೊಮ್ಮೆ ಉಂಟಾಗುತ್ತಿರುವ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಕಾರ್ಡ್‌ದಾರರು ತೊಂದರೆಯಾಗಿದೆ.