ಮೂಡಲಗಿ : ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಬೇಕು. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಉದ್ಯೋಗಗಳು ಸೃಷ್ಠಿಯಾಗಲಿವೆ. ಜೊತೆಗೆ ಕನ್ನಡ ಭಾಷೆಯ ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಂತಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕು ಘಟಕ ಆಯೋಜಿಸಿದ್ದ ಮೂಡಲಗಿ ತಾಲೂಕಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದರು.
ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣವೂ ಸಹ ದೊರೆಯುತ್ತಿದೆ. ಇತ್ತೀಚೆಗೆ ನಮ್ಮ ಕೆಎಂಎಫ್ ಸಂಸ್ಥೆಯಿಂದ ನಡೆಸಿರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಇದರರ್ಥ ಗ್ರಾಮೀಣ ಭಾಗದಲ್ಲಿಯೂ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಿರುವುದರಿಂದ ಅವರ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಕನ್ನಡದಲ್ಲಿಯೇ ಪರೀಕ್ಷೆಗಳು ನಡೆಸಿದರೆ ನಮ್ಮ ರಾಜ್ಯದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿರುವುದರಿಂದ ತಾಲ್ಲೂಕಾ ಮಟ್ಟದ ಕಛೇರಿಗಳು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿವೆ. ಈಗಾಗಲೇ ಉಪನೋಂದಣಾಧಿಕಾರಿ ಕಛೇರಿ ಕೂಡ ಬಂದಿರುವುದರಿಂದ ಇಲ್ಲಿನ ನಿವೇಶನಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಪ್ರತಿ ಎಕರೆಗೆ ಕೋಟಿಗಟ್ಟಲೇ ಹಣವನ್ನು ನೀಡಬೇಕಾಗುತ್ತದೆ. ಆದಾಗ್ಯೂ ಸಾಹಿತ್ಯ ಪರಿಷತ್ತಿನ ಮನವಿಯ ಮೇರೆಗೆ ಸಾಹಿತ್ಯ ಆಸಕ್ತರಿಗೆ ಅನುಕೂಲವಾಗಲು ಮೂಡಲಗಿಯಲ್ಲಿ ಸಾಹಿತ್ಯ ಭವನವನ್ನು ನಿರ್ಮಿಸಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಒಗ್ಗಟ್ಟಿನಿಂದ ಸಂಘಟಿತರಾದರೇ ಎಂತಹ ಬೇಕಾದ ಸಾಧನೆಯನ್ನು ಮಾಡಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಶಿವಾಪೂರ(ಹ) ಗ್ರಾಮದಲ್ಲಿಂದು ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಜಿಲ್ಲಾ ಸಮ್ಮೇಳನದಂತೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಗ್ರಾಮದ ಮುಖಂಡರು ಒಗ್ಗಟ್ಟಿನಿಂದ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಜಾತ್ರೆಯನ್ನಾಗಿ ಪರಿವರ್ತಿಸಿದ್ದಾರೆ. ಅದಕ್ಕಾಗಿ ಸಮಸ್ತ ಗ್ರಾಮಸ್ಥರನ್ನು ಹಾಗೂ ಕನ್ನಡಾಭಿಮಾನಿಗಳನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ನಿಲ್ಲಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ಕನ್ನಡದ ಕೆಲಸಗಳಿಗೆ ಯಾವತ್ತೂ ಕಂಕಣಬದ್ಧರಾಗಿ ನಿಲ್ಲುತ್ತೇವೆ. ನಾಡು-ನುಡಿ, ನೆಲ-ಜಲ ವಿಷಯಗಳು ಬಂದಾಗ ಎಲ್ಲರೂ ಸಂಘಟಿತರಾಗಿ ಹೋರಾಡೋಣ. ನಮ್ಮ ಕನ್ನಡಾಂಬೆಗೆ ಗೌರವ ಸಲ್ಲಿಸೋಣ. ಕನ್ನಡಕ್ಕಾಗಿ ಎಂತಹ ಕೆಲಸಕ್ಕೂ ನಾವು ಬದ್ಧರಿದ್ದೇವೆ ಎಂದು ಹೇಳಿದರು.
ಮೂಡಲಗಿ ತಾಲೂಕು ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕøತಿಕವಾಗಿ ವೈಶಿಷ್ಟ್ಯಪೂರ್ಣವಾಗಿದ್ದು ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ಶಿಕ್ಷಣ, ಕೃಷಿ, ಸಹಕಾರ, ಸಾಹಿತ್ಯ, ಕಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲಕ್ಕೂ ನನ್ನ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹ ನಿರಂತರವಾಗಿ ನೀಡುತ್ತೇನೆ. ಜಾನಪದ ಕಲೆಗಳು ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಲಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಹಲವಾರು ಜಾನಪದ ಕಲೆಗಳು, ಕಲಾವಿಧರಿದ್ದು, ಕಲೆಗಳನ್ನು ಸಂರಕ್ಷಿಸುವುದು ಮತ್ತು ಕಲಾವಿಧರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
2018 ರಲ್ಲಿ ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬಂದಿರುವ ಮೂಡಲಗಿ ತಾಲೂಕಿನಲ್ಲಿ ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ತಾಲೂಕಿನ ಸಾಹಿತಿಗಳು, ಬರಹಗಾರರು, ಗುಣಮಟ್ಟದ ಸಾಹಿತ್ಯವನ್ನು ರಚಿಸುವ ಮೂಲಕ ಮೂಡಣ ನಾಡನ್ನು ದಶ ದಿಕ್ಕುಗಳಲ್ಲಿ ಬೆಳೆಯುವಂತೆ ಮಾಡುವಂತಾಗಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
93 ರ ವಯಸ್ಸಿನ ಹಿರಿಯ ಸಾಹಿತಿ ರೇ. ಭಾಸ್ಕರ ಸಣ್ಣಕ್ಕಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಸಮ್ಮೇಳನಕ್ಕೆ ಕಳೆ ಬಂದಿದೆ. ದಲಿತ ವ್ಯಕ್ತಿಗೆ ದೊಡ್ಡ ಗೌರವ ನೀಡಿರುವ ಕಸಾಪವನ್ನು ಅಭಿನಂದಿಸಿದ ಅವರು, ಸಣ್ಣಕ್ಕಿ ಅವರ ಜೀವನ ಸುಖದಿಂದ ಕೂಡಿರಲಿ ಎಂದು ಆಶಿಸಿದರು.