ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಿರುವ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗಿದೆ. ಹೀಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಮೋದಿಯವರು ರಾಜ್ಯದ ಕಡೆ ಮುಖ ಮಾಡುವ ವೇಳೆಗೆ ಬಿಜೆಪಿಯ ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳುಗಳ ಉತ್ಪಾದನೆಯಲ್ಲಿ ಬಿರುಸಾಗಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ದೇಶದ ಆರ್ಥಿಕತೆ ಕುಸಿದಿರುವುದು, ಹಣದುಬ್ಬರ ಸೇರಿದಂತೆ ಪ್ರಧಾನಿ ಮೋದಿ ಅವರು ಆಡಳಿತಾತ್ಮಕವಾಗಿ ದೇಶವನ್ನು ಸೋಲಿಸಿದ್ದಾರೆ. ದೇಶದ ಜನ ಎರಡು ಬಾರಿ ಕೊಟ್ಟ ಬಹುಮತಕ್ಕೆ ಅನ್ಯಾಯ, ಅವಮಾನ ಮಾಡಿರುವ ಕೇಂದ್ರ ಸರ್ಕಾರ ತಮಗೆ ಮತ ಹಾಕಿದವರ ಬದುಕನ್ನೂ ಹೈರಾಣ ಮಾಡಿಟ್ಟು ಕೇವಲ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿಸುವ ಸುಳ್ಳಿನ ಆಧಾರದಲ್ಲಿ ತನ್ನ ಸಂಪ್ರದಾಯದಂತೆ ಜನರನ್ನು ಬಕ್ರಾ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ದೇಶದ ವಿದೇಶಿ ಸಾಲ 2013-14ರಲ್ಲಿ 409.4 ಬಿಲಿಯನ್ ಡಾಲರುಗಳಷ್ಟಿತ್ತು. 2014ರ ಮೇನಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 58 ರೂಪಾಯಿಗಳಷ್ಟಿತ್ತು. ಹಾಗಾಗಿ ಅಂದು 23.74 ಲಕ್ಷ ಕೋಟಿಗಳಷ್ಟು ವಿದೇಶಿ ಸಾಲ ಇತ್ತು.2022ರ ಜೂನ್‌ನಲ್ಲಿ ಆರ್‌ಬಿಐ ಪ್ರಕಟಿಸಿರುವಂತೆ ಭಾರತದ ವಿದೇಶಿ ಸಾಲ 619 ಬಿಲಿಯನ್ ಡಾಲರುಗೆ ಏರಿದೆ. ಈಗ ರೂಪಾಯಿಯ ಬೆಲೆ 82 ರೂ. ಆಗಿದೆ. ಆದ್ದರಿಂದ ಈಗ ವಿದೇಶಿ ಸಾಲ 50.76 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಹೊರ ದೇಶಗಳಲ್ಲಿ ಮಾಡಿದ ಸಾಲ 27 ಲಕ್ಷ ಕೋಟಿ ರೂಪಾಯಿಗಳು. ಆದರೆ, ಸುಳ್ಳಿನ ಕಾರ್ಖಾನೆಯಲ್ಲಿ, “ಮೋದಿಯವರು ದೇಶದ ಸಾಲ ತೀರಿಸಿದ್ದಾರೆ” ಎಂದು ಭಜನೆ ಮಾಡುತ್ತಿದ್ದಾರೆ. ಸತ್ಯ ಏನೆಂದರೆ ಮೋದಿಯವರು ಸಾಲ ತೀರಿಸಿಲ್ಲ ಬದಲಾಗಿ ಹಿಮಾಲಯದಂತೆ ಬೆಳೆಸಿದ್ದಾರೆ ಎಂದು ಆರೋಪಿಸಿದ್ದಾರೆ.