ಬೆಂಗಳೂರು: ‘ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂಥ ಪುಸ್ತಕಗಳನ್ನು (ಸಿದ್ದು ನಿಜ ಕನಸುಗಳು) ಹೊರತರುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ.
ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪು ಥರ ಖಡ್ಗ ಹಿಡಿದು ಉಡುಗೆ ಧರಿಸಿದವರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ. ಟಿಪ್ಪು ಬಗೆಗಿನ ಶೇಖ್ ಅಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ಲವೇ’ ಎಂದು ಪ್ರಶ್ನಿಸಿದರು.
‘ಚುನಾವಣೆ ಸಮೀಪಿಸುತ್ತಿರುವಾಗ ಇಂಥ ಪುಸ್ತಕ ಹೊರತರುತ್ತಿರುವುದು ಮಾನನಷ್ಟದ ಉದ್ದೇಶ ಹೊಂದಿದೆ. ಕಾನೂನು ಪ್ರಕಾರ ಏನು ಮಾಡಲು ಆಗುತ್ತದೊ ನೋಡೋಣ’ ಎಂದರು.
ಕೃತಿ ಬಿಡುಗಡೆ: ಪುರಭವನದಲ್ಲಿ ಸಂಜೆ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕದಲ್ಲಿ ಸಿದ್ದರಾಮಯ್ಯ ಪೋಟೊವನ್ನು ಟಿಪ್ಪು ಮಾದರಿಯಲ್ಲಿ ಹಾಕಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಯೋಜಕರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
Laxmi News 24×7