ಬೆಂಗಳೂರು, : ರಾಜ್ಯ ರಾಜಕಾರಣವು ಹೊಸದೊಂದು ಸಂಚಲನಕ್ಕೆ ಅಣಿಯಾಗುತ್ತಿದೆ ಎಂಬ ಮಾತುಗಳು ಓಡಾಡುತ್ತಿವೆ. ಬೆಳಗಾವಿಯ ಪ್ರಭಾವಿ ರಾಜಕಾರಣಿ ರಮೇಶ ಜಾರಕಿಹೊಳಿ ತಮ್ಮ ಗುರು ಸಿದ್ದರಾಮಯ್ಯನವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು.
ಆದರೆ, ಅವರಿಬ್ಬರ ನಡುವೆ ನಡೆದ ಮಾತುಕತೆಗಳೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೂಲದ ಪ್ರಕಾರ, ರಮೇಶ ಜಾರಕಿಹೊಳಿ ಅವರು ಬಿಜೆಪಿಯ ನಾಯಕರೊಂದಿಗೆ ಮುನಿಸಿಕೊಂಡಿದ್ದಾರೆ. ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ ತಮಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಈ ವಿಚಾರವನ್ನು ಹೈಕಮಾಂಡ್‌ವರೆಗೆ ತೆಗೆದುಕೊಂಡು ಹೋದ ಸಿಎಂ ಬೊಮ್ಮಾಯಿ ಅವರಿಗೆ ಸಿಹಿಸುದ್ದಿ ಸಿಕ್ಕಿರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಚಿವ ಸ್ಥಾನದ ಬೇಡಿಕೆಯನ್ನು ಒಪ್ಪಿರಲಿಲ್ಲ. ಇದು ರಮೇಶ ಜಾರಕಿಹೊಳಿ ಅವರ ಮುನಿಸಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ರಮೇಶ ಜಾರಕಿಹೊಳಿ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಇದೇ ಕಾರಣಕ್ಕೆ ಭೇಟಿ ಆಗಿರಬಹುದು ಎಂದು ಹೇಳಲಾಗುತ್ತಿದೆ. ರಮೇಶ ಜಾರಕಿಹೊಳಿ ಸಿದ್ದರಾಮಯ್ಯನವರ ಶಿಷ್ಯರೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಮರಳಿ ಕಾಂಗ್ರೆಸ್‌ಗೆ ಸೇರುವ ಬಯಕೆಯನ್ನು ರಮೇಶ ಜಾರಕಿಹೊಳಿ ಹೊಂದಿರಬಹುದು. ಈ ಕಾರಣಕ್ಕೆ ಸಿದ್ದರಾಮಯ್ಯನವರನ್ನು ಭೇಟಿಯಾಗಿ ರಮೇಶ ಜಾರಕಿಹೊಳಿ ರಹಸ್ಯ ಮಾತುಕತೆ ನಡೆಸಿರಬಹುದು.
ರಮೇಶ ಜಾರಕಿಹೊಳಿ ಅವರ ಸಚಿವ ಸ್ಥಾನ ಹೋಗಲು ಡಿ.ಕೆ.ಶಿವಕುಮಾರ್ ಕಾರಣವೆಂದು ಆರೋಪಿಸಲಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆಶಿ ವಿರುದ್ಧ ರಮೇಶ ಜಾರಕಿಹೊಳಿ ಹರಿಹಾಯುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜಾರಕಿಹೊಳಿ ಭೇಟಿ ಮಾಡಿಲ್ಲ. ತಮ್ಮ ಗುರುವಿನ ಮೂಲಕವೇ ಪಕ್ಷಕ್ಕೆ ಮರಳಿದರೆ, ಒಳಿತಾಗಬಹುದು ಎಂಬ ನಿಲುವನ್ನು ರಮೇಶ ಜಾರಕಿಹೊಳಿ ತಳೆದಿರಬಹುದು.
ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ, ಡಿ.ಕೆ.ಶಿವಕುಮಾರ್ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಬಾರಿ ಶತಾಯಗತಾಯ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜನವರಿ 11ರಿಂದ ಯಾತ್ರೆಯನ್ನು ಆರಂಭಿಸಲಿದ್ದಾರೆ. ಇದೇ ವೇಳೆ, ತಮ್ಮ ಪಕ್ಷಕ್ಕೆ ಎಲ್ಲರಿಗೂ ಸ್ವಾಗತವಿದೆ ಎಂದು ಡಿಕೆಶಿ ಹೇಳಿದ್ದಾರೆ.
ನಮ್ಮ ಜೊತೆ ಮುನಿಸಿಕೊಂಡವರು, ಪಕ್ಷದೊಂದಿಗೆ ಅಸಮಾಧಾನ ಹೊಂದಿ ಹೊರಹೋದವರು ಮರಳಿ ಪಕ್ಷಕ್ಕೆ ಬನ್ನಿ ಎಂದು ಡಿಕೆಶಿ ಆಹ್ವಾನ ನೀಡಿದ್ದಾರೆ. ‘ಸೋಲುವ ಪಕ್ಷದೊಂದಿಗೆ ಯಾಕೆ ಹೋಗುತ್ತೀರಿ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ನೀವು ಅಧಿಕಾರವನ್ನು ಅನುಭವಿಸಬಹುದು’ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಿದ್ದು ಮೂಲಕ ಮರಳಿ ಗೂಡಿಗೆ ಬರಲು ಸಿದ್ದತೆ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.