ಕೌಜಲಗಿ: ಪಟ್ಟಣದ ಕಳ್ಳಿಗುದ್ದಿ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ ಗುರುವಾರ ಅತ್ಯಂತ ಶ್ರದ್ಧೆ-ಭಕ್ತಿಯಿಂದ ಜರುಗಿತು.
ಕೌಜಲಗಿ ಸಾಯಿ ಸೇವಾ ಸಮಿತಿ ಹಾಗೂ ಸಮಸ್ತ ಭಕ್ತರ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರಾತಃಕಾಲದಲ್ಲಿ ಸಾಯಿಬಾಬಾಗೆ ಮಹಾರುದ್ರಾಭಿಷೇಕ ಜರುಗಿತು. ಕೌಜಲಗಿ ಪ್ರದೇಶ ಅಭಿವೃದ್ಧಿ ಹಾಗೂ ಪ್ರಾಣಿಗಳ ಸಾಂಕ್ರಾಮಿಕ ಕಾಯಿಲೆ ನಿವಾರಣೆಗಾಗಿ ಪ್ರಾರ್ಥಿಸಿ ಈರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಹೋಮ- ಹವನಗಳು ಜರುಗಿದವು.
ಅನಂತರ ಸಾಯಿಬಾಬಾ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕ್ಕಿಯು ಭಕ್ತ ಕನಕದಾಸ ವೃತ್ತ, ರವಿವರ್ಮ ಚೌಕ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ಪೇಟೆ, ಟಿಪ್ಪು ಸುಲ್ತಾನ್ ಸಭಾ ಮಂಟಪ, ಸಂಗೊಳ್ಳಿ ರಾಯಣ್ಣ ಬಸ್ ತಂಗುದಾಣ, ಮಾರುತಿ ದೇವಸ್ಥಾನ, ಕೌಜಲಗಿ ನಿಂಗಮ್ಮ ರಂಗಮಂದಿರ ಮಾರ್ಗವಾಗಿ ಸಂಚರಿಸಿತು.
ವಿವಿಧ ಕಲಾ ತಂಡಗಳೊಂದಿಗೆ ವಿಜಯಪುರ ಜಿಲ್ಲೆಯ ಸಾರವಾಡದ ಈಶ್ವರ ಗೊಂಬೆ ಗೆಳೆಯರ ಬಳಗದ ಗೊಂಬೆಯಾಟವು ಪಲ್ಲಕ್ಕಿ ಉತ್ಸವದ ಮೆರುಗು ಹೆಚ್ಚಿಸಿತು. ಪಲ್ಲಕ್ಕಿ ಉತ್ಸವ ಸಾಯಿ ಮಂದಿರ ತಲುಪಿದ ಮೇಲೆ ಭಕ್ತರಿಗೆ ಮಹಾಪ್ರಸಾದ ಉಣಬಡಿಸಲಾಯಿತು.