ಬೆಳಗಾವಿ: ಜಿಲ್ಲೆಯಲ್ಲಿ ಚರ್ಮಗಂಟು (ಲಂಪಿಸ್ಕಿನ್) ರೋಗ ವ್ಯಾಪಕವಾಗಿ ಹರಡುತ್ತಿದ್ದು, ನಾಲ್ಕೇ ತಿಂಗಳಲ್ಲಿ 4,665 ಜಾನುವಾರು ಮೃತಪಟ್ಟಿವೆ. ಆದರೆ, ಬಹುಪಾಲು ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಮಾತ್ರ ಅಲ್ಪಮೊತ್ತದ ಹಣ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
‘ಚರ್ಮಗಂಟು ರೋಗ ಶಾಪವಾಗಿ ಪರಿಣಮಿಸಿದೆ. ಈ ಸೋಂಕಿನಿಂದ ಮೃತಪಟ್ಟಿರುವ 1 ವರ್ಷದೊಳಗಿನ ಕರುವಿಗೆ ತಲಾ ₹5 ಸಾವಿರ, ಆಕಳಿಗೆ ₹20 ಸಾವಿರ ಮತ್ತು ಎತ್ತಿಗೆ ₹30 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಇದು ಏತಕ್ಕೂ ಸಾಲದು. ಮೇಲಾಗಿ, ಆ ಪರಿಹಾರವೂ ಇನ್ನೂ ಸಿಕ್ಕಿಲ್ಲ’ ಎಂದು ತಾಲ್ಲೂಕಿನ ಗಣಿಕೊಪ್ಪದ ರೈತರಾದ ಅಭಿಷೇಕ ಹಿರೇಮಠ, ಶಿವಲಿಂಗ ಗಾಬಿ, ಸಿದ್ಧನಗೌಡ ಪಾಟೀಲ ಅಳಲು
ತೋಡಿಕೊಂಡರು.