ಬೆಂಗಳೂರು : ಗಡಿವಿವಾದಗಳನ್ನು ಬಗೆಹರಿಸಲು ಅತ್ಯಂತ ಬಲಿಷ್ಠವಾಗಿರುವ ಹಿರಿಯ ವಕೀಲರ ತಂಡವನ್ನು ರಚನೆ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ತಮ್ಮ ರೇಸ್ ಕೋರ್ಸ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿವಿವಾದದ ಬಗ್ಗೆ ಸಭೆ ನಡೆಸಲಾಗಿದೆ. ತಂಡವು ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಉದಯ್ ಹೊಳ್ಳ , ಬೆಳಗಾವಿಯ ಮಾರುತಿ ಜಿರ್ಲೆ, ವಕೀಲರಾದ ರಘುಪತಿ ಅವರನ್ನೊಳಗೊಂಡಿದೆ ಎಂದರು.
ವಕೀಲರ ತಂಡವು ಈಗಾಗಲೇ 2-3 ಬಾರಿ ಸಭೆ ಸೇರಿ ವಿಷಯಗಳ ಬಗ್ಗೆ ಏನು ವಾದ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಈ ವಕೀಲರೊಂದಿಗೆ ವೀಡಿಯೋ ಸಂವಾದ ನಡೆಸುತ್ತಿದ್ದು, ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕರಿಗೆ ಹಾಗೂ ಎಲ್ಲಾ ಪಕ್ಷದ ನಾಯಕರಿಗೆ ಈಗಾಗಲೇ ಪತ್ರವನ್ನು ನಾಳೆ ಬೆಳಿಗ್ಗೆ ಕಳಿಸಿಕೊಡಲಾಗುತ್ತಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.
ಮಾಹಾರಾಷ್ಟ್ರ ಸಲ್ಲಿಸಿರುವ ಅರ್ಜಿಗೆ ಮಾನ್ಯತೆ ದೊರಕಿಲ್ಲ. ಮೆಂಟೇನಬಿಲಿಟಿ ಈವರೆಗೆ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಮೆಂಟೇನಬಿಲಿಟಿ ಆಗಬೇಕೋ ಬೇಡವೋ ಎನ್ನುವ ಬಗ್ಗೆಯೇ ಇನ್ನೂ ಚರ್ಚೆಯಾಗುತ್ತಿದೆ. ಮುಖ್ಯ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಇನ್ನೂ ಪರಿಗಣಿಸಿಲ್ಲ.ಮೆಂಟೇನಬಿಲಿಟಿ ಆಗುವುದಿಲ್ಲ, ಇದನ್ನು ಪರಿಗಣಿಸಬಾರದು ಎಂದು ವಾದಿಸಲು ನಾವು ಸಿದ್ಧರಿದ್ದೇವೆ. ಸಂವಿಧಾನ ಬದ್ಧವಾಗಿ 3 ನೇ ಕಲಂ ಪ್ರಕಾರ ರಾಜ್ಯ ಪುನರ್ ವಿಂಗಡನಾ ಕಾಯ್ದೆ ರಚನೆಯಾಯಿತು. ಕಾಯ್ದೆಯ ಪ್ರಕಾರ ಆಗಿದ್ದನ್ನು ಪುನರ್ ಪರಿಶೀಲನೇ ಮಾಡಿದ ಉದಾಹರಣೆ ಇಲ್ಲ ಹಾಗೂ ಅಂಥ ಸಂದರ್ಭವೂ ಒದಗಿಬಂದಿಲ್ಲ ಎಂದರು.