ಬೆಂಗಳೂರು: ಎಂ.ಆರ್.ಎನ್. ಶುಗರ್ಸ್ ಆಯಂಡ್ ಬಯೋಫೈನರ್ಸ್ ಮುಧೋಳ (ಮುರುಗೇಶ ನಿರಾಣಿ) ಅವರ ಸಂಸ್ಥೆಯಿಂದ 36 ತಿಂಗಳ ಶೇ 50ರಷ್ಟು ಬಾಕಿ ವೇತನ ಪಾವತಿಯಾಗಿಲ್ಲ ಎಂದು ಪಿ.ಎಸ್.ಎಸ್.ಕೆ ಎಂಪ್ಲಾಯೀಸ್ ಅಸೋಸಿಯೇಷನ್ ಆರೋಪಿಸಿದೆ.
‘ಸರ್ಕಾರ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸಚಿವ ಮುರುಗೇಶ ನಿರಾಣಿ ಅವರ ಸಂಸ್ಥೆಗೆ 41 ವರ್ಷಗಳ ಗುತ್ತಿಗೆ ನೀಡಿದೆ.
2020ರಲ್ಲಿ ಸಚಿವರ ನೇತೃತ್ವದಲ್ಲಿ ನಡೆದ ಕಾರ್ಮಿಕ ಮುಖಂಡರ ಸಭೆಯಲ್ಲಿ 3 ವರ್ಷಗಳಿಂದ ಕಾರ್ಖಾನೆ ನಡೆಯದ ಕಾರಣ ನಿಮ್ಮ ವೇತನ ನೀಡಿಲ್ಲ. ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿ ಸಕ್ಕರೆ ಬಿದ್ದ ತಕ್ಷಣ ನಿಮ್ಮ ಎಲ್ಲಾ ವೇತನವನ್ನು ನೀಡಲಾಗುವುದು ಎಂದಿದ್ದರು, ಆದರೆ ಇದುವರೆಗೆ ಪಾವತಿ ಮಾಡಿಲ್ಲ’ ಎಂದು ಅಸೋಸಿಯೇಷನ್ ಅಧ್ಯಕ್ಷ ಡಿ. ಚಿಕ್ಕಯ್ಯ ಆರೋಪಿಸಿದರು.
‘2020ರಲ್ಲಿ 1,70,000 ಟನ್, 2021ರಲ್ಲಿ 4,60,000 ಟನ್ ಮತ್ತು 2022ರಲ್ಲಿ 3,30,000 ಟನ್ ಕಬ್ಬು ನುರಿಸಲಾಗಿದ್ದು, ಬಾಕಿ ವೇತನ, ರಜಾ ವೇತನ, ಶಾಸನಬದ್ಧ ಬೋನಸ್, 6 ಮತ್ತು 7ನೇ ತ್ರಿಪಕ್ಷೀಯ ಮಂಡಳಿಯ ಹಿಂಬಾಕಿ ಮತ್ತು ಪಿ.ಎಫ್ ಹಣವನ್ನು ನೀಡಬೇಕು’ ಎಂದು ಆಗ್ರಹಿಸಿದರು.
‘ನಿವೃತ್ತಿ ಹೊಂದಿದ ಕಾರ್ಮಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕೆಲವರು ಈಗಾಗಲೇ ನಿಧನರಾಗಿದ್ದಾರೆ. ಆದ್ದರಿಂದ ತಕ್ಷಣ ಹಣ ಬಿಡುಗಡೆ ಮಾಡಬೇಕು’ ಎಂದು ವೇಣುಗೋಪಾಲ ಹೇಳಿದರು.