ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೂಗೆಯಲು ಜನರು ಈಗಾಗಲೇ ಸಂಕಲ್ಪ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು.
ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸರ್ವೋದಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಮುಳುಗಿ ಹೋಗಿರುವ ಬಿಜೆಪಿ ಇದೀಗ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ.
ಆದರೆ ಶೇ.40% ಕಮಿಷನ್ ಸರ್ಕಾರದ ಆಡಳಿತ ವೈಖರಿಯಿಂದ ನಾಡಿನ ಜನತೆ ರೋಸಿ ಹೋಗಿದ್ದು ಬಿಜೆಪಿಯನ್ನು ಕಿತ್ತೂಗೆಯಲು ಜನರು ಸಂಕಲ್ಪ ಮಾಡಿದ್ದಾರೆಂದು ವಾಗ್ಧಾಳಿ ನಡೆಸಿದರು.
ಇಂತಹ ಭಂಡ ಸರ್ಕಾರವನ್ನು ನಾವೆಂದೂ ನೋಡಿರಲಿಲ್ಲ. ಕಮಿಷನ್ ಇಲ್ಲದೆ ಯಾವ ಕೆಲಸವೂ ನಡೆಯುತ್ತಿಲ್ಲ. ಈಗಾಗಲೇ ಕಂಟ್ರಾಕ್ಟರ್ ಅಸೋಸಿಯೇಷನ್ ಪರ್ಸೆಂಟೆಜ್ ಬಗ್ಗೆ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದೆ. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಕೂಡ ಆತ್ಮಹತ್ಯೆ ಪತ್ರ ಬರೆದು ಸಾವೀಗಿಡಾದ. ಈಗ ಮತ್ತೊಬ್ಬರು ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ ಎಂದರು.
ಇದರ ಬೆನ್ನಲ್ಲೇ ಇನ್ಸ್‌ಪೆಕ್ಟರ್ ನಂದೀಶ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ. ಆತ ಎಷ್ಟು ಹಣ ನೀಡಿದ್ದ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸಚಿವರೇ ಹೇಳಿದ್ದಾರೆ ಎಂದು ಟೀಕಿಸಿದರು.
ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಶಕ್ತಿ ಬಂದಿದೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಾವೆಲ್ಲರೂ ಒಟ್ಟಾಗಿ ಮತ್ತೆ ಹೋರಾಟ ನಡೆಸಿ ಕಾಂಗ್ರೆಸ್ ಅಧಿಕಾರಕ್ಕೆ ತಂದೇ ತರುತ್ತೇವೆಂದು ಸಂಕಲ್ಪ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತು, ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರೈತರ, ಬಡವರ, ದೀನ ದಲಿತರ ವಿರೋಧಿ ಕೋಮುವಾದ ಬಿಜೆಪಿಯನ್ನು ಕಿತ್ತೂಗೆಯಲು ಕಾಂಗ್ರೆಸ್ ಕಾರ್ಯಕರ್ತರು ಕೂಡ ಪಣ ತೊಟ್ಟಿದ್ದಾರೆ ಎಂದರು.