ಪಣಜಿ: ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ವರ್ಷ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಾ.
ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಂಟಿ ನಾರ್ಕೋಟಿಕ್ಸ್ ಸೆಲ್ ಅನ್ನು ಬಲಿಷ್ಠಗೊಳಿಸಲು ಅದರ ಸಿಬ್ಬಂದಿಯನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಮತ್ತು ಗೋವಾದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳಿಗಾಗಿ ಶೋಧ ನಡೆಯುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 700 ನೈಜೀರಿಯನ್ನರ ಪೈಕಿ 650 ನೈಜೀರಿಯನ್ನರು ಅಕ್ರಮವಾಗಿ ವಾಸಿಸುತ್ತಿದ್ದರು. ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಪಶ್ಚಿಮ ರಾಜ್ಯಗಳ ಗೃಹ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಪಣಜಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಸಾವಂತ್ ಭಾಗವಹಿಸಿದ್ದರು. ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಈ ಸಭೆಯ ಪ್ರಮುಖ ವಿಷಯವಾಗಿತ್ತು.