ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನ. 11ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ನಗರಕ್ಕೆ ಬರಲಿದ್ದು, ಕಾರ್ಯಕ್ರಮಗಳ ಸಿದ್ಧತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಅವರು ಗುರುವಾರ ವಿಡಿಯೊ ಸಂವಾದದ ಮೂಲಕ ಚರ್ಚಿಸಿದರು.
ಅಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ಅನಾವರಣ ಮಾಡಲಿದ್ದಾರೆ. ಬಳಿಕ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ತಮ್ಮ ಭೇಟಿಯ ಸಂದರ್ಭದಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ವಿವರವನ್ನು ಮುಖ್ಯಮಂತ್ರಿಯಿಂದ ಪ್ರಧಾನಿ ಪಡೆದರು. ಅಲ್ಲದೆ, ತಮ್ಮ ಭೇಟಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಡಚಣೆ ಆಗದಂತೆ ಸಿದ್ಧತೆ ಕೈಗೊಳ್ಳಲು ಸೂಚಿಸಿದರು.