ಬೆಳಗಾವಿ: ಸಾಮಾನ್ಯ ಮಕ್ಕಳ ಬೆಳವಣಿಗೆಯಂತೆ ಆರೋಗ್ಯದ ಹಾಗೂ ಅಂಗವೈಕಲ್ಯದ ಸವಾಲು ಎದುರಿಸುತ್ತಿರುವ ಅಸಾಮಾನ್ಯ ಮಕ್ಕಳ ಬೆಳವಣಿಗೆ ಇರುವುದಿಲ್ಲ. ಅವರಿಗೆ ವಿಶೇಷ ಕಾಳಜಿ ಹಾಗೂ ಆರೈಕೆ ಮಾಡುವುದು ಬಹಳ ಮುಖ್ಯ. ಅವರಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಭೌತಿಕ ಚಿಕಿತ್ಸೆ ಅತ್ಯವಶ್ಯವಾಗಿ ಬೇಕು.
ಇದರಲ್ಲಿ ತಾಯಂದಿರ ಕಾರ್ಯ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕಾಹೆರನ ಉಸ್ತವಾರಿ ಉಪಕುಲಪತಿ ಹಾಗೂ ಡಾ| ಎನ್ ಎಸ್ ಮಹಾಂತಶೆಟ್ಟಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಅಕ್ಯುಪೇಶನಲ್ ಥೆರಪಿ (ಭೌತಿಕ ಚಿಕಿತ್ಸೆ) ವಿಭಾಗವು ಅಂಗವೈಕಲ್ಯ ಹೊಂದಿರುವ ಮಕ್ಕಳ ಆರೈಕೆ ಹಾಗೂ ಅವರ ನಿರ್ವಹಣೆ ಕುರಿತು ಪಾಲಕರಿಗಾಗಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮೊದಲಿನ ಮೂರು ವರ್ಷದ ಕಲಿಕೆ ಮುಖ್ಯವಾಗಿರುತ್ತದೆ. ಅದರಲ್ಲಿಯೂ ಹೈರಿಸ್ಕ್ ಮಕ್ಕಳ ಕುರಿತು ಅತ್ಯಧಿಕ ಕಾಳಜಿ
ವಹಿಸಬೇಕಾಗುತ್ತದೆ ಎಂದರು.
ಚಿಕ್ಕಮಕ್ಕಳ ನರರೋಗ ತಜ್ಞ ವೈದ್ಯ ಡಾ| ಮಹೇಶ ಕಮತೆ ಮಾತನಾಡಿ, ಮಕ್ಕಳಿಗೆ ವಿಶೇಷ ಕಾಳಜಿ ಜೊತೆಗೆ ಅವಶ್ಯವಿರುವ ಚಿಕಿತ್ಸೆ ನೀಡುವ ತಂಡದ ಪರಿಶ್ರಮ ಅಲ್ಲದೇ ಸಮಚಿತ್ತ ಹಾಗೂ ಸಮಾಧಾನ ಇರಬೇಕು. ಇದು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಶೇ. 100 ರಷ್ಟು ಮಕ್ಕಳು ಸಾಮಾನ್ಯವಾಗುವುದಿಲ್ಲ. ಆದರೆ ಮಗು ಎಲ್ಲ ಕಾರ್ಯ ಮಾಡುವಂತೆ ತಯಾರು ಮಾಡಬಹುದು ಎಂದು ಹೇಳಿದರು.