ಬೆಳಗಾವಿ: ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ನಗರದ ಟಿಳಕವಾಡಿ ಮೂರನೇ ರೈಲ್ವೇ ಗೇಟ್ ಮೇಲ್ಸೇತುವೆ(Flyover) ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಿ.ಸುರೇಶ ಅಂಗಡಿ(Suresh Angadi) ಕನಸಿನ ಕೂಸು ಆಗಿರುವ ನಗರದ ಟಿಳಕವಾಡಿ ಮೂರನೇ ರೈಲ್ವೆ ಗೇಟ್ ರಸ್ತೆ ಮೇಲ್ಸೇತುವೆಯನ್ನು ಕಳೆದ ನಾಲ್ಕು ದಿನಗಳ ಹಿಂದೆ ಸುರೇಶ್ ಅಂಗಡಿ ಧರ್ಮಪತ್ನಿ, ಸಂಸದೆ ಮಂಗಳ ಸುರೇಶ ಅಂಗಡಿ ಉದ್ಘಾಟಿಸಿದ್ದರು. ಆದರೆ ಅವರು ಚಾಲನೆ ನೀಡಿದ ನಾಲ್ಕೇ ದಿನಕ್ಕೆ ಮೇಲ್ಸೇತುವೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಇತ್ತ ಬಿದ್ದ ಗುಂಡಿಗಳಿಗೆ ಮತ್ತೆ ಪ್ಯಾಚ್ ವರ್ಕ್ ಮಾಡಿ ಗುತ್ತಿಗೆದಾರ ಕೈ ತೊಳೆದುಕೊಂಡಿದ್ದಾನೆ.
ಖಾನಾಪುರ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್ ನಿಂದ ಸಂಚಾರ ಸಮಸ್ಯೆ ಆಗುತ್ತಿತ್ತು. ಹೀಗಾಗಿ ರೈಲ್ವೆ ಇಲಾಖೆ ಟಿಳಕವಾಡಿ ರೈಲ್ವೆಯ ಮೂರನೇ ಗೇಟ್ ಬಳಿ ರಸ್ತೆ ಮೇಲ್ಸೆತುವೆ ನಿರ್ಮಿಸಿತ್ತು. ಟ್ರಾಫಿಕ್ ಸಮಸ್ಯೆ ತಪ್ಪಿಸಲು 2019ರಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಆರಂಭವಾಗಿತ್ತು. ಅಂದು ಸುರೇಶ ಅಂಗಡಿಯವರು ಶಂಕುಸ್ಥಾಪನೆ ಮಾಡಿದ್ದರು. ಸುಮಾರು 18ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಗೊಂಡಿತ್ತು.