ಸಂಬರಗಿ/ಕಾಗವಾಡ: ಕೃಷಿ, ನೀರಾವರಿಗಾಗಿ ಇಸ್ರೇಲ್ ಹಾಗೂ ಇತರ ದೇಶಗಳಿಗೆ ಅಧ್ಯಯನಕ್ಕೆ ತೆರಳುವ ಬದಲು ರಾಜ್ಯದ ರೈತರು ಶಾಸಕ ಶ್ರೀಮಂತ ಪಾಟೀಲರ ಕ್ಷೇತ್ರಕ್ಕೆ ಅಧ್ಯಯನಕ್ಕೆ ಬರಬೇಕು ಎಂದು ವಿಧಾನ ಸಭೆಯ ಭರವಸೆ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ನಂತರ ಸಂಬರಗಿಯಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಅಗ್ರಾಣಿ ನದಿಯಲ್ಲಿ ಸಂಚಾರಕ್ಕೆ ನೂತನ ಬೋಟ್ ಹಸ್ತಾಂತರಿಸಿ ಮಾತನಾಡಿದ ಅವರು, ಗಡಿ ಭಾಗದ ಬರಗಾಲ ಪೀಡಿತ ಪ್ರದೇಶದಲ್ಲಿ ರೈತರ ಸಹಯೋಗದಲ್ಲಿ ಶ್ರೀಮಂತ ಪಾಟೀಲರು ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ಕೊಡುವ ಮೂಲಕ ಆಹಾರ ಭದ್ರತೆ ಹೆಚ್ಚಿಸಿದ್ದಾರೆ. ಎಲ್ಲರೂ ಸರಕಾರದ ಮೇಲೆ ಅವಲಂಬಿತರಾಗದೇ ಇಂತಹ ಯೋಜನೆಗಳಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಶ್ರೀಮಂತ ಪಾಟೀಲರ ಈ ಯೋಜನೆಗಳ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಜೊತೆಗೆ ಎಲ್ಲ ಶಾಸಕರು ತಮ್ಮ ತಮ್ಮ ಮತಕ್ಷೇತ್ರಗಳಲ್ಲಿ ಇಂತಹ ಯೋಜನೆಗಳನ್ನು ರೈತರ ಸಹಯೋಗದಲ್ಲಿ ಅನುಷ್ಠಾನಕ್ಕೆ ತಂದಲ್ಲಿ ಒಕ್ಕಲುತನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.
ಗುಂಡೇವಾಡಿಯ ಶ್ರೀಮಂತ ಪಾಟೀಲ ಏತ ನೀರಾವರಿ ಸಂಘದ ಸಚೀನ ವೀರ ಮಾತನಾಡಿ, ಶ್ರೀಮಂತ ಪಾಟೀಲರು ಶಾಸಕರಾಗುವ ಮೊದಲೇ ಈ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇದರಿಂದ ಈ ಭಾಗದ ಸಾವಿರಾರು ಎಕರೆ ಭೂಮಿ ನೀರಾವರಿಗೊಳಪಟ್ಟಿದೆ ಎಂದರು.
ಭರವಸೆ ಸಮಿತಿ ಸದಸ್ಯ, ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ಭರವಸೆ ಸಮಿತಿ ಸದಸ್ಯರು ಹಿಪ್ಪರಗಿ ಆಣೆಕಟ್ಟು ಹಿನ್ನೀರಿನಿಂದ ತೊಂದರೆಗೊಳಗಾದ ಸಂತ್ರಸ್ತರ ಪುನರ್ ವಸತಿ ಯೋಜನೆ ಹಾಗೂ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಖೀಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ನಿಗದಿತ ಅವಧಿ ಯಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು.