ಬೆಂಗಳೂರು: ತಮ್ಮ ಕ್ಲಿನಿಕ್ ಗೆ ಬರುವ ರೋಗಿಗಳಿಗೆ ಕೇವಲ ಐದು ರೂಪಾಯಿ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿರುವ ಮಂಡ್ಯದ ಪ್ರಸಿದ್ದ ವೈದ್ಯ ಶಂಕರೇಗೌಡ ಅವರಿಗೆ ಸಿಎನ್‌ಎನ್ ನ್ಯೂಸ್18 ಸಂಸ್ಥೆ ವತಿಯಿಂದ ನೀಡಲಾಗುವ ಈ ಬಾರಿಯ ‘ಇಂಡಿಯನ್ ಆಫ್ ದಿ ಇಯರ್-2022’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಡಾ.ಶಂಕರೇಗೌಡರಿಗೆ ‘ಇಂಡಿಯನ್ ಆಫ್ ದಿ ಇಯರ್-2022’ ಪ್ರಶಸ್ತಿ ನೀಡಲಾಗಿದೆ. ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
‘ನಾನು 1982ರಿಂದ ಅಭ್ಯಾಸ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ ಐದು ರೂಪಾಯಿ ಶುಲ್ಕ ಹಾಕುತ್ತೇನೆ. ನಮ್ಮಲ್ಲಿ ಯಾವ ಜ್ಞಾನವಿದೆಯೋ ಅದನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕು. ಹಾಗಾಗಿ ನನ್ನ ಜ್ಞಾನವನ್ನು ನನ್ನ ಶಿಕ್ಷಣಕ್ಕೆ ಕಾರಣರಾದ ನನ್ನ ಜನರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಪದವಿ ಪಡೆದ ನಂತರ ನನ್ನ ಊರಿನಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದೆ ಎಂದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈದ್ಯ ಡಾ.ಶಂಕರೇಗೌಡ ಹೇಳಿದರು.
Laxmi News 24×7