ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತು ಲೇವಡಿ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ಮೋದಿ ಅವರು ಹೇಳಿದಂತೆ ಸೋನಿಯಾ, ರಾಹುಲ್ ಕಾಂಗ್ರೆಸ್ ಮುಖಂಡರನ್ನು ಬೀದಿಗೆ ತಂದಿದ್ದಾರೆ ಎಂದರು.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಿಜೆಪಿಯ ಮೇಲೆ ಯಾವ ಪರಿಣಾಮ ಸಹ ಬೀರುವುದಿಲ್ಲ. ಇದರಿಂದ ಇನ್ನೂ ಒಳ್ಳೆಯದ್ದೇ ಆಗಿದೆ. ಅವರ ಬಣ್ಣ ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದರು.
ಭ್ರಷ್ಟರೆಲ್ಲರನ್ನು ರಸ್ತೆಗೆ ತರುತ್ತೇವೆಂದು ಪ್ರಧಾನಿ ಮೋದಿ ಅವರು ಮೊದಲೇ ಹೇಳಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರು ಎಂದಾದರೂ ರಸ್ತೆಯಲ್ಲಿ ನಡೆದಿದ್ದರಾ?. ಈಗ ನೋಡಿ ರಸ್ತೆಯಲ್ಲಿ ಕುಣಿಯುತ್ತಿದ್ದಾರೆ, ಓಡಾಡುತ್ತಿದ್ದಾರೆ. ಅವರಿಗೆ ಹುಚ್ಚು ಹಿಡಿದಂತಾಗಿದೆ. ಪಾಪ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಇದು ಬಿಜೆಪಿಯ ದೊಡ್ಡ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು