ಬೆಳಗಾವಿ: ಮಲಪ್ರಭ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ರಕ್ಷಿಸುವ ಮೂಲಕ ಯುವಕ ಸಾಹಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಬಸಾಪುರ ಗ್ರಾಮದ ಬಾಳಮ್ಮ ನಾವಳಗಿ (90) ಆತ್ಮಹತ್ಯೆಗೆ ಯತ್ನಿಸಿದ್ದರು. ವೃದ್ಧೆ ನದಿಗೆ ಹಾರಿದ್ದನ್ನು ಯುವಕ ಗಮನಿಸಿದ್ದಾನೆ. ತಕ್ಷಣವೇ ಪ್ರಾಣದ ಹಂಗು ತೊರೆದು ನದಿಗೆ ಹಾರಿ ರಕ್ಷಣೆ ಮಾಡಿದ್ದಾನೆ. ಪಾರಿಶ್ವಾಡ ಗ್ರಾಮದ ಐಜಾಜ್ ಮಾರಿಹಾಳ ವೃದ್ಧೆ ರಕ್ಷಿಸಿದ ಯುವಕ ಎಂಬುದು ತಿಳಿದು ಬಂದಿದೆ.
ಯುವಕನ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನದಿ ಹಾರಿ ನೀರು ಕುಡಿದ ವೃದ್ಧೆ ಅಸ್ವಸ್ಥಗೊಂಡಿದ್ದಾರೆ. ವೃದ್ಧೆಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.