ಆದಿಪುರುಷ್’ ಟೀಸರ್ ಬಿಡುಗಡೆ ಮಾಡಿದ ಬೆನ್ನಲ್ಲೆ ಚಿತ್ರತಂಡ ತೀವ್ರ ಟ್ರೋಲಿಂಗ್ ಎದುರಿಸುತ್ತಿದೆ. ಕಳಪೆ ಮಟ್ಟದ ವಿಎಫ್‌ಎಕ್ಸ್‌ನಿಂದಾಗಿ ವಿಪರೀತ ಟ್ರೋಲ್ ಆಗಿರುವ ಜೊತೆಗೆ ರಾಮಾಯಣದ ಪಾತ್ರಗಳನ್ನು ತಮಗೆ ತೋಚಿದಂತೆ ಪ್ರೆಸೆಂಟ್ ಮಾಡಿರುವುದು ಸಹ ಆಕ್ರೋಶಕ್ಕೆ ಗುರಿಯಾಗಿದೆ.
ಕೆಲವು ಹಿಂದು ಸಂಘಟನೆಗಳು ಸಹ ‘ಆದಿಪುರುಷ್’ ಟೀಸರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಈಗ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ‘ಆದಿಪುರುಷ್’ ಟೀಸರ್ ಬಗ್ಗೆ ಕಣ್ಣು ಕೆಂಪಗೆ ಮಾಡಿಕೊಂಡಿದ್ದು, ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
‘ಆದಿಪುರುಷ್’ ಸಿನಿಮಾದ ಟೀಸರ್‌ನಲ್ಲಿ ಹನುಮಂತನ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನ್ಯಕ್ಕೂ ಸಹ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಇದು ಹನುಮಂತ ದೇವರಿಗೆ ಮಾಡಿದ ಅಪಮಾನ, ಹಿಂದು ಧರ್ಮಕ್ಕೆ ಮಾಡಿದ ಅಪಮಾನ ಎಂದಿದ್ದಾರೆ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ.
”ಈ ಬಗ್ಗೆ ನಾನು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ. ಆ ದೃಶ್ಯಗಳನ್ನು ತೆಗೆದು ಹಾಕುವಂತೆ ಮನವಿ ಮಾಡುತ್ತೇನೆ. ಒಂದೊಮ್ಮೆ ಅವರು ಆ ದೃಶ್ಯಗಳನ್ನು ತೆಗೆದು ಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
‘ಆದಿಪುರುಷ್’ ಸಿನಿಮಾದ ಟೀಸರ್ ಈಗಾಗಲೇ ತೀವ್ರವಾಗಿ ಟ್ರೋಲ್ ಆಗಿದೆ. ಸಿನಿಮಾದಲ್ಲಿ ಬಳಸಲಾಗಿರುವ ಕಳಪೆ ದರ್ಜೆಯ ವಿಎಎಫ್‌ಎಕ್ಸ್ ಅನ್ನು ಪ್ರಭಾಸ್ ಅಭಿಮಾನಿಗಳು ಸೇರಿದಂತೆ ಹಲವರು ತೀವ್ರವಾಗಿ ಟೀಕಿಸಿದ್ದಾರೆ. ಇದೀಗ ಮಧ್ಯ ಪ್ರದೇಶ ಗೃಹ ಸಚಿವರು ಸಹ ಸಿನಿಮಾದ ದೃಶ್ಯಗಳನ್ನು ಬದಲಾಯಿಸುವಂತೆ ಎಚ್ಚರಿಕೆ ನೀಡಿದ್ದಾರೆ.