Breaking News

ವೈಭವದ ನಾಡಹಬ್ಬಕ್ಕೆ ಇಂದು ರಾಷ್ಟ್ರಪತಿ ಚಾಲನೆ: ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಲಿರುವ ದ್ರೌಪದಿ ಮುರ್ಮು

Spread the love

ಮೈಸೂರು: ಸಾಂಸ್ಕೃತಿಕ ಸಿರಿ ಮತ್ತು ಧಾರ್ವಿುಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವೊಂದು ಸುಂದರ ದೃಶ್ಯಕಾವ್ಯ. ವರ್ಷಕ್ಕೊಮ್ಮೆ ಬರುವ ಈ ರಮಣೀಯ ಘಳಿಗೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೋವಿಡ್ ಸಂಕ್ರಮಣದಿಂದ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಲಿದೆ. ಸೆ. 26ರಂದು ನಾಡಹಬ್ಬದ ಅಂಕದ ಪರದೆ ಗರಿ ಬಿಚ್ಚಲಿದೆ.

ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಚಾಲನೆ: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದಸರೆಗೆ ಸೆ.26ರಂದು ಬೆಳಗ್ಗೆ 9.45ರಿಂದ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ವಿಧ್ಯುಕ್ತವಾಗಿ ಚಾಲನೆ ನೀಡಿ ಮುನ್ನುಡಿ ಬರೆಯಲಿದ್ದಾರೆ. ದೇಶದ ಪ್ರಥಮ ಪ್ರಜೆಯಿಂದ ಉದ್ಘಾಟನೆ ಆಗುತ್ತಿರುವುದು ಇದೇ ಮೊದಲು. ಬಳಿಕ ಸಾಲು ಸಾಲು ದಸರಾ ಚಟುವಟಿಕೆಗಳು ಅನಾವರಣಗೊಳ್ಳಲಿದ್ದು, 10 ದಿನಗಳ ಕಾಲ ಹಬ್ಬದ ನವೋಲ್ಲಾಸ ಕಳೆಗಟ್ಟಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಹಿರಿಮೆ: ದಸರಾದ ವೈಶಿಷ್ಟ್ಯಾದ ಸಾಂಸ್ಕೃತಿಕ ಕಾರ್ಯಕ್ರಮ ಅರಮನೆ ಅಂಗಳದಲ್ಲಿ ನಿತ್ಯ ಸಂಜೆ ಗರಿಗೆದರಲಿದೆ. ಕಲಾವಿದರು 290 ವಿವಿಧ ಬಗೆಯ ಕಾರ್ಯಕ್ರಮಗಳನ್ನು ಉಣಬಡಿಸಲಿದ್ದಾರೆ. ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ, ಕಿರುರಂಗಮಂದಿರ, ಚಿಕ್ಕಗಡಿಯಾರ ಹಾಗೂ ಪುರಭವನ ವೇದಿಕೆಯಲ್ಲೂ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕಲಾಸಂಸ್ಕೃತಿ ನೋಡಲು ಸಿಗಲಿದೆ.

ಯುವ ದಸರಾದಲ್ಲಿ ಮಂಗ್ಲಿ ಮಿಂಚು: ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸುವ ‘ಯುವ ದಸರಾ’ ಸೆ.27ರಿಂದ ಏಳು ದಿನಗಳ ಕಾಲ ವರ್ಣರಂಜಿತವಾಗಿ ನಡೆಯಲಿದೆ. ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ, ಬಾಲಿವುಡ್ ಗಾಯಕರಾದ ಕನ್ನಿಕಾ ಕಪೂರ್, ಅಮಿತ್ ತ್ರಿವೇದಿ ಮತ್ತು ಸುನಿಧಿ ಚೌಹಾಣ್ ಸಂಗೀತದ ಧೂಳೆಬ್ಬಿಸಲಿದ್ದಾರೆ. ಗಾಯಕ ರಾದ ರಘು ದೀಕ್ಷಿತ್, ಡಾ.ಶಮಿತಾ ಮಲ್ನಾಡ್ ಸಹ ಮೋಡಿ ಮಾಡಲಿದ್ದಾರೆ.

ಕುಸ್ತಿಗೆ ‘ಸಾಕ್ಷಿ’: ಕುಸ್ತಿ ಕಾಳಗಕ್ಕೆ ಈ ಬಾರಿ ಖ್ಯಾತ ಕುಸ್ತಿಪಟು ಸಾಕ್ಷಿ ಮಲ್ಲಿಕ್ ವಿಶೇಷ ಆಹ್ವಾನಿತರಾಗಿದ್ದು, ಪಂಜಕುಸ್ತಿ ಟೂರ್ನಿಯೂ ಇದೆ.

ಬಿಗಿ ಭದ್ರತೆ: ದಸರೆಗೆ ಖಾಕಿ ಸರ್ಪಗಾವಲು ಹಾಕಲಾಗಿದೆ. 5,485 ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ, ಡ್ರೋನ್ ಕ್ಯಾಮರಾ, ಬಾಡಿ ವೋರ್ನ್ ಕ್ಯಾಮರಾ ಮೂಲಕವೂ ಕಣ್ಗಾವಲು ಇಡಲಾಗಿದೆ.

ದಸರೆಯಲ್ಲೂ ಅಪ್ಪು ಜೀವಂತ: ಪುನೀತ್ ರಾಜ್​ಕುಮಾರ್​ಗೆ ದಸರೆಯಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ಚಲನಚಿತ್ರೋತ್ಸವದಲ್ಲೂ ‘ಅಪ್ಪು ದಿನ’ ಆಚರಿಸಲಾಗುತ್ತಿದೆ. ಅವರ ಆರು ಸಿನಿಮಾಗಳನ್ನು ತೋರಿಸಲಾಗುತ್ತಿದೆ. ದೀಪಾಲಂಕಾರದಲ್ಲಿ ಪವರ್​ಸ್ಟಾರ್​ಗೆ ಬೆಳಕಿನ ರೂಪಕ ನೀಡಿದ್ದರೆ, ಫಲಪುಷ್ಪ ಪ್ರದರ್ಶನದಲ್ಲೂ ‘ಯುವರತ್ನ’ನಿಗೆ ಹೂವಿನ ಸಿಂಗಾರ ಮಾಡಲಾಗಿದೆ.

ಅರಮನೆಯಲ್ಲೂ ಸಡಗರ: ಖಾಸಗಿ ದಸರಾಕ್ಕೂ ಅರಮನೆ ಸಿದ್ಧವಾಗಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 9ನೇ ಬಾರಿಗೆ ಖಾಸಗಿ ದರ್ಬಾರ್ ಮುನ್ನಡೆಸುವರು. ಆಳರಸರ ಗತಕಾಲದ ವೈಭವವೂ ಗರಿಗೆದರಲಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ