Breaking News

ಉಮೇಶ ಕತ್ತಿ ಉತ್ತರಾಧಿಕಾರಿ ಯಾರು?

Spread the love

ಬೆಳಗಾವಿ: ಹಿರಿಯ ನಾಯಕ ಉಮೇಶ ಕತ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಯಾರು? ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೆ ಈ ಅವಕಾಶ ದೊರೆಯಲಿದೆ?

ಇಂತಹ ಹಲವಾರು ಪ್ರಶ್ನೆ ಮತ್ತು ಚರ್ಚೆಗಳು ಈಗ ನಡೆದಿವೆ. ಉಮೇಶ ಕತ್ತಿ ಸ್ಥಾನ ತುಂಬುವ ಕೆಲಸ ಅಂದುಕೊಂಡಷ್ಟು ಸರಳವಾಗಿಲ್ಲ.

ಈಗಿನ ಪರಿಸ್ಥಿತಿಯಲ್ಲಿ ಅದು ಒಂದು ರೀತಿಯಲ್ಲಿ ಜೇನುಗೂಡಿಗೆ ಕೈ ಹಾಕಿದಂತೆ. ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎಂಬ ಗೊಂದಲದಲ್ಲಿರುವ ಸರ್ಕಾರ ಮತ್ತು ಪಕ್ಷದ ವರಿಷ್ಠರು ಇದೇ ಕಾರಣಕ್ಕೆ ಯಾವುದನ್ನೂ ಅನವಶ್ಯಕವಾಗಿ ಮೈಮೇಲೆಳೆದುಕೊಳ್ಳಲು ತಯಾರಿಲ್ಲ.

ಜತೆಗೆ ಗುತ್ತಿಗೆದಾರ ಸಂತೋಷ ಪಾಟೀಲ ವಿಷಯದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ನೀಡಿದ್ದ ಕೆ.ಎಸ್‌.ಈಶ್ವರಪ್ಪ ಸಹ ಕ್ಲೀನ್‌ ಚಿಟ್‌ ಪಡೆದು ಮತ್ತೆ ಸಚಿವ ಸ್ಥಾನಕ್ಕೆ ಒತ್ತಾಯ ಮಾಡಿದ್ದಾರೆ. ಹೀಗಾಗಿ ಉಮೇಶ ಕತ್ತಿ ಸ್ಥಾನಕ್ಕೆ ಯಾರು ಬರಬಹುದು, ಯಾರಿಗೆ ಅದೃಷ್ಟ ಒಲಿಯಬಹುದು ಎಂಬ ಚರ್ಚೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಜಿಲ್ಲೆಯಲ್ಲಿ 13 ಬಿಜೆಪಿ ಶಾಸಕರು: ಹಾಗೆ ನೋಡಿದರೆ ಉಮೇಶ ಕತ್ತಿ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಪೈಪೋಟಿಯೇ ಇದೆ. ಒಟ್ಟು 18 ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರಿದ್ದಾರೆ. ಆದರೆ ಉಮೇಶ ಕತ್ತಿ ಅಗಲಿಕೆ ನಂತರ ಜಿಲ್ಲೆಯನ್ನು ಪ್ರತಿನಿಧಿಸುವ ಶಶಿಕಲಾ ಜೊಲ್ಲೆ ಮಾತ್ರ ಸಚಿವರಾಗಿದ್ದಾರೆ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪಕ್ಕದ ಬಾಗಲಕೋಟೆ ಜಿಲ್ಲೆಯವರು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲಿ ಜಿಲ್ಲೆಯಿಂದ ನಾಲ್ವರು ಸಚಿವರಾಗಿದ್ದರು. ಅದು ಈಗ ಕೇವಲ ಒಂದು ಸಂಖ್ಯೆಗೆ ಬಂದು ನಿಂತಿದೆ.

ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ವರಿಷ್ಠರು ಉಮೇಶ ಕತ್ತಿ ಸ್ಥಾನ ತುಂಬಲು ನಿರ್ಧರಿಸಿದರೆ ಇದಕ್ಕೆ ಸಾಕಷ್ಟು ಪೈಪೋಟಿ ನಡೆಯಲಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸಚಿವರಾಗಬೇಕೆಂಬ ಪ್ರಯತ್ನದಲ್ಲಿರುವ ಪ್ರಮುಖರು. ಇಬ್ಬರೂ ನಾಯಕರು ಕಳೆದ ಹಲವಾರು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಇವರಿಬ್ಬರ ಹೊರತಾಗಿ ಶಾಸಕರಾದ ಅಭಯ ಪಾಟೀಲ, ಪಿ.ರಾಜೀವ ಹೆಸರು ಸಹ ಪ್ರಮುಖವಾಗಿ ಕೇಳಿಬರುತ್ತಿದೆ. ಆದರೆ ಈಗಿನ ಬೆಳವಣಿಗೆ ನೋಡುವುದಾದರೆ ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಂತಹ ಯಾವುದೇ ಚಟುವಟಿಕೆಗಳು ಪಕ್ಷದ ವಲಯದಲ್ಲಿ ನಡೆದಿರುವಂತೆ ಕಂಡು ಬರುತ್ತಿಲ್ಲ.ಜಿಲ್ಲೆಯಲ್ಲೂ ಹೊಸ ರಾಜಕೀಯ ಚಟುವಟಿಕೆಗಳು ಕಾಣುತ್ತಿಲ್ಲ.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ