ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಾರ ಮಳೆಯಿಂದ ಜನತೆಗೆ ತೊಂದರೆ ಉಂಟಾಗುತ್ತಿದ್ದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಚಿವ ಗೋವಿಂದ ಕಾರಜೋಳ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಗೋಕಾಕ್‍ನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಗಹೊಳಿ ಅವರು ಕಳೆದ ಭಾರೀ ಕೂಡ ಪ್ರವಾಹಕ್ಕೆ ಸರ್ಕಾರವಾಗಲಿ, ಸಚಿವರಾಗಲಿ ಜನತೆಗೆ ಸ್ಪಂದನೆ ನೀಡಲಿಲ್ಲ. ಈ ಭಾರಿಯೂ ಅದೇ ನಿರ್ಲಕ್ಷ್ಯ ಮುಂದುವರಿದಿದೆ.
ಕೆಲವು ಕಡೆ ಮಳೆಯಿಂದ ಮನೆಗಳು ಬಿದ್ದಿವೆ. ಕೆಲವರನ್ನು ಸ್ಥಳಾಂತರ ಮಾಡಲಾಗಿದ್ದು, ಇನ್ನುಳಿದವರನ್ನು ಹಾಗೆ ಬಿಡಲಾಗಿದೆ ಎಂದು ಆರೋಪಿಸಿದರು.ಯಮಕನಮರಡಿಯಲ್ಲಿ ನನ್ನನ್ನು ಟಾರ್ಗೆಟ್ ಮಾಡಿ ಪ್ರಯೋಜನವಿಲ್ಲ. ಜನ ಬೆಂಬಲ ನಮ್ಮ ಕಡೆ ಇದ್ದಾಗ ಬಿಜೆಪಿಯವರು ಏನು ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ಅಧಿಕಾರಕ್ಕಾಗಿ ಅನ್ಯ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ಇದೇ ವೇಳೆ ಸತೀಶ ಜಾರಕಿಹೊಳಿ ಟಾಂಗ್ ಕೊಟ್ಟರು.