ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ಗಳಿಗೆ ನಿಗದಿ ಪಡಿಸಿರುವ ಮೀಸಲಾತಿ ಮರು ಪರಿಶೀಲನೆ ನಡೆಸುವ ಕುರಿತು ಸರ್ಕಾರದ ನಿಲುವು ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಕೇಳಿದೆ. ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆಲವು ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮಾತ್ರ ಮೀಸಲಿರಿಸಲಾಗಿದೆ. ಪುರುಷರು ಹೆಚ್ಚಾಗಿದ್ದರೂ ಮಹಿಳೆಯರಿಗೇ ಮೀಸಲಿರಿಸಲಾಗಿದೆ. ಆ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೀಸಲು ನಿಗದಿಯಲ್ಲಿ ಏನಾದರೂ ಲೋಪ ಕಂಡರೆ ಹೊಸದಾಗಿ ಮೀಸಲು ನಿಗದಿಪಡಿಸುವಂತೆ ಅದೇಶ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿತು.
ಅಲ್ಲದೇ, ಹೊಸದಾಗಿ ವಾರ್ಡ್‌ವಾರು ಮೀಸಲು ನಿಗದಿ ಮಾಡುವ ಬಗ್ಗೆ ಸರ್ಕಾರದ ನಿಲುವು ಏನು ಎಂಬುದನ್ನು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ಚುನಾವಣಾ ಆಯೋಗದ ಪರ ವಕೀಲರು ವಾದ ಮಂಡಿಸಿ, ಸೆ.22ಕ್ಕೆ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು. ಆನಂತರ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.