Breaking News

ಭ್ರಷ್ಟರ ಶಿಕಾರಿಗೆ ಲೋಕಾ ತಯಾರಿ: ಎಸಿಬಿ ಸಿಬ್ಬಂದಿ, ಕಡತಗಳ ಹಸ್ತಾಂತರ ಇಂದು ಪೂರ್ಣ

Spread the love

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಿಂದ ಖದರ್ ಕಳೆದುಕೊಂಡು ಮಂಕಾಗಿದ್ದ ಲೋಕಾಯುಕ್ತಕ್ಕೀಗ ಹಳೇ ಖದರ್ ಮರಳಿದೆ. ಸೋಮವಾರದಿಂದ ಭ್ರಷ್ಟರ ಶಿಕಾರಿ ಮತ್ತೆ ಶುರುವಾಗಲಿದೆ. ಎಸಿಬಿಯಲ್ಲಿದ್ದ 141ಕ್ಕೂ ಹೆಚ್ಚು ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳು ಈಗಾಗಲೇ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದಾರೆ.

ಸೋಮವಾರ ಸಂಜೆ ವೇಳೆಗೆ ಎಲ್ಲ ಪ್ರಕರಣಗಳ ಕಡತಗಳೂ ಲೋಕಾಯುಕ್ತ ಸುಪರ್ದಿಗೆ ಸೇರಿ ಎಸಿಬಿ ಸಂಪೂರ್ಣ ಇತಿಹಾಸ ಸೇರಲಿದೆ. ಏತನ್ಮಧ್ಯೆ ಎಸಿಬಿ ದಾಳಿಗೊಳಗಾದರೂ ನಿರಾಳರಾಗಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಲೋಕಾಯುಕ್ತ ಭೀತಿ ಶುರುವಾಗಿದೆ.

ಎಸಿಬಿ ಸ್ಥಾಪನೆಯಾದ 2016ರಿಂದ 2022ರ ಜೂನ್​ವರೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ 2,121 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,034 ಪ್ರಕರಣಗಳು ತನಿಖಾ ಹಂತದಲ್ಲಿವೆ. ಉಳಿದ ಪ್ರಕರಣಗಳಲ್ಲಿ ಕೆಲವಕ್ಕೆ ಕ್ಲೀನ್​ಚಿಟ್ ಕೊಟ್ಟಿದ್ದರೆ, ಕೆಲ ಪ್ರಕರಣಗಳಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿ ವಿಚಾರಣೆ ನಡೆಯುತ್ತಿದೆ. ಈಗ ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ, ತನಿಖಾ ಹಂತದ ಸ್ಥಿತಿ ಪರಿಶೀಲನೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಲೋಕಾಯುಕ್ತದಲ್ಲಿ ಈ ಮೊದಲು ದಾಖಲಾಗಿದ್ದ 350ಕ್ಕೂ ಅಧಿಕ ಪ್ರಕರಣ ಬಾಕಿ ಇವೆ. ಈಗ ಎಸಿಬಿಯಲ್ಲಿರುವ ಪ್ರಕರಣಗಳೂ ವರ್ಗಾವಣೆಯಾಗುತ್ತಿರುವುದರಿಂದ 1400 ಕೇಸ್​ಗಳ ತನಿಖೆ ಮತ್ತು ವಿಚಾರಣೆ ಶುರುವಾಗಲಿದೆ.

ಕೆಳಹಂತದ ಹುದ್ದೆಗಳಷ್ಟೇ ವರ್ಗ: ಎಸಿಬಿಯಲ್ಲಿ ಎಡಿಜಿಪಿ ಸೇರಿ 322 ಹುದ್ದೆಗಳಿವೆ. ಒಬ್ಬರು ಐಜಿಪಿ, 10 ಎಸ್ಪಿಗಳು, 35 ಹೆಚ್ಚುವರಿ ಎಸ್ಪಿಗಳು, 75 ಇನ್​ಸ್ಪೆಕ್ಟರ್​ಗಳು ಮತ್ತು 200 ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳ ಹುದ್ದೆಗಳಿವೆ. ಸದ್ಯ ಕೆಳಹಂತದ ಸಿಬ್ಬಂದಿ ಮಾತ್ರ ಲೋಕಾಯುಕ್ತಕ್ಕೆ ನಿಯೋಜಿಸಿದ್ದು, ಮೇಲಿನ ಹಂತದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯೂ ಶೀಘ್ರವೇ ಆರಂಭವಾಗಲಿದೆ.

ಲೋಕಾಯುಕ್ತಕ್ಕೆ ಒಟ್ಟಾರೆ ಗ್ರೂಪ್ ಎ, ಬಿ, ಸಿ, ಡಿ ಕೆಟಗರಿಯ 1,403 ಹುದ್ದೆಗಳು ಮಂಜೂರಾಗಿವೆ. ಸದ್ಯ 430ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಎಸಿಬಿಯಿಂದ ಬಂದಿರುವ ಪೊಲೀಸ್ ಕಾನ್​ಸ್ಟೆಬಲ್​ಗಳಿಂದ ಬಹುತೇಕ ಹುದ್ದೆಗಳು ಭರ್ತಿಯಾಗಿವೆ. ಗುಮಾಸ್ತ, ಸಹಾಯಕರು, ಸ್ವೀಪರ್ಸ್, ಸ್ಟೆನೋಗ್ರಾಫರ್ಸ್ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ.

 

 


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ