ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಕೇಂದ್ರ ನೆರೆ ಅಧ್ಯಯನ ತಂಡವು ಶನಿವಾರ(ಸೆ.10) ಪರಿಶೀಲನೆ ನಡೆಸಿತು.
ಕೇಂದ್ರ ಜಲ ಆಯೋಗದ ಜಲಶಕ್ತಿ ಸಚಿವಾಲಯದ ನಿರ್ದೇಶಕರಾದ ಅಶೋಕ ಕುಮಾರ್ ವಿ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ಧಾರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ವಿ.ವಿ.ಶಾಸ್ತ್ರಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರರಾದ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಅವರು ಜತೆಗಿದ್ದರು.
ಬೆಳಗಾವಿಯಿಂದ ಪ್ರವಾಸ ಆರಂಭಿಸಿದ ಕೇಂದ್ರ ತಂಡವು ಮೊದಲಿಗೆ ಯಳ್ಳೂರ ರಸ್ತೆಯಲ್ಲಿ ಭತ್ತದ ಬೆಳೆಹಾನಿಯನ್ನು ವೀಕ್ಷಿಸಿತು.
ಇದಾದ ಬಳಿಕ ಖಾನಾಪುರ ತಾಲ್ಲೂಕಿನ ಶಿಂಗಿನಕೊಪ್ಪ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾನಿಯನ್ನು ಪರಿಶೀಲಿಸಿ, ಮಾಹಿತಿಯನ್ನು ಪಡೆದುಕೊಂಡರು.