ಚಿಂಚೋಳಿ: ರಾಜ್ಯದ ಅರಣ್ಯ ಮತ್ತು ಆಹಾರ ಸಚಿವ ಉಮೇಶ ಕತ್ತಿ ಅವರು ತಾಲೂಕಿಗೆ ಕಳೆದ ಜೂನ್ 27ರಂದು ಭೇಟಿ ನೀಡಿ, ಪೋಲಕಪಳ್ಳಿ ಗ್ರಾಮದ ಹತ್ತಿರ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಮ ಉದ್ಘಾಟಿಸಿದ್ದ ಕ್ಷಣಗಳು ಸ್ಮರಣೀಯವಾಗೇ ಉಳಿದವು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತಾಲೂಕಿಗೆ ಪ್ರಥಮ ಬಾರಿ ಭೇಟಿ ನೀಡಿದ್ದ ಸಚಿವ ಉಮೇಶ ಕತ್ತಿ ಅವರು “ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಮ’ ಉದ್ಘಾಟಿಸಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅರಣ್ಯಪ್ರದೇಶ ಹೊಂದಿರುವ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಅರಣ್ಯ ಕಾಲೇಜು ಮಂಜೂರಿಗೊಳಿಸುತ್ತೇನೆ. ಜಂಗಲ್ ರೆಸಾರ್ಟ ಮಂಜೂರಿಗೊಳಿಸುತ್ತೇನೆ. ನಾನೇ ಬಂದು ಉದ್ಘಾಟಿಸುತ್ತೇನೆ ಎಂದು ಸಾರ್ವಜನಿಕರಿಗೆ ಬಹಿರಂಗವಾಗಿ ಹೇಳಿದ್ದರು.
ಆದರೆ ಮರಳಿಬಾರದ ಊರಿಗೆ ಹೋಗಿ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಈ ಭಾಗದ ಜನರ ಅನೇಕ ವರ್ಷಗಳ ಆಶಯವಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ 50 ರಾಜ್ಯಗಳು ಉದಯವಾಗಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಉದಯವಾದರೆ ನಾನಂತೂ ಮುಖ್ಯಮಂತ್ರಿ ಆಗುವುದಿಲ್ಲ. ನನ್ನ ಮಗ ಮುಖ್ಯಮಂತ್ರಿ ಆಗಬಹುದು ಎಂದು ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದರು.