ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಗೊಂದಲಕ್ಕೆ ತೆರೆ ಎಳೆದಿರುವ ಹೈಕೋರ್ಟ್, 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ದಿಂದ ಅವಕಾಶ ವಂಚಿತರಾಗುವ ಆತಂಕದಲ್ಲಿದ್ದ 2020-21ನೇ ಸಾಲಿನ ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ.
2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2022 ಜು. 30ರಂದು ಹೊರ ಡಿಸಿದ್ದ ಟಿಪ್ಪಣಿಯನ್ನು ಹೈಕೋರ್ಟ್ ರದ್ದು ಮಾಡಿದೆ. ಇದರಿಂದ ಕೋವಿಡ್-19 ಕಾರಣದಿಂದ ಪರೀಕ್ಷೆ ಬರೆ
ಯದೆ “ಆಂತರಿಕ ಮೌಲ್ಯಮಾಪನದ’ ಆಧಾರದಲ್ಲಿ 2021ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಅನುಕೂಲವಾದಂತಾಗಿದೆ.
ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ಸಂಬಂಧ ಶನಿವಾರ ನ್ಯಾ| ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ. ಜತೆಗೆ 2020-21ನೇ ಸಾಲಿನಲ್ಲಿ ಪಿಯುಸಿ ತೇರ್ಗಡೆಯಾದವರು ಗಳಿಸಿದ ಶೇ.50 ಅಂಕ ಮತ್ತು ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ್‍ಯಾಂಕ್ ಪಟ್ಟಿ ಪ್ರಕಟಿಸಬೇಕು ಎಂದು ಸರಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೆಇಎ ನೀತಿ ತಾರತಮ್ಯ ಮತ್ತು ಕಾನೂನುಬಾಹಿರವಾಗಿದೆ. ಹಾಗಾಗಿ, 2020-21, 2021-22ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಅರ್ಜಿದಾರ ವಿದ್ಯಾರ್ಥಿಗಳು ಪಡೆದ ಅಂಕಗಳಲ್ಲಿ ಶೇ.50 ಅಂಕ ಮತ್ತು ಸಿಇಟಿಯಲ್ಲಿ ಪಡೆದಿರುವ ಶೇ.50 ಅಂಕ ಆಧರಿಸಿ ರ್‍ಯಾಂಕ್ ಪ್ರಕಟಿಸಲು ಕೆಇಎಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
25:75 ಸೂತ್ರ ನಿರಾಕರಣೆ
2020-21ನೇ ಸಾಲಿನ ಪಿಯು ಪರೀಕ್ಷೆಯ ಶೇ.50 ಅಂಕಗಳನ್ನು ಪರಿಗಣಿಸಲು ಸರಕಾರಕ್ಕೆ ನಿರ್ದೇ ಶಿಸುವಂತೆ ಅರ್ಜಿದಾರರು ಕೋರಿ ದ್ದಾರೆ. ಮತ್ತೂಂದೆಡೆ ಕೋವಿಡ್ ಹಿನ್ನೆಲೆ ಯಲ್ಲಿ 2021ನೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣ ಆಗಿರುವುದರಿಂದ ಅವರ ಮನವಿ ಪರಿಗಣಿಸುವುದಿಲ್ಲ ಎಂಬು ದಾಗಿ ಸರಕಾರ ಹೇಳುತ್ತಿದೆ. ಹಾಗಾಗಿ, ಸಿಇಟಿಯ ಶೇ.75 ಅಂಕ ಮತ್ತು ಪಿಯು ಪರೀಕ್ಷೆಯ ಶೇ.25ರಷ್ಟು ಅಂಕ ಪರಿಗಣಿಸಿ ರ್‍ಯಾಂಕ್ ಲಿಸ್ಟ್ ಪ್ರಕಟಿಸಲು ಸಾಧ್ಯವೇ ಎಂದು ಹೈಕೋರ್ಟ್ ಸರಕಾರವನ್ನು ಕೇಳಿತ್ತು. ಇದಕ್ಕೆ ಸರಕಾರ ಒಪ್ಪಿರಲಿಲ್ಲ.
ಹೈಕೋರ್ಟ್ ಹೇಳಿದ್ದು
01.ಕಳೆದ ಸಾಲಿನ ಪಿಯು ಅಂಕಗಳನ್ನು ಬೇರೆ ಪದವಿ ಕೋರ್ಸ್‌ಗಳಿಗೆ ಪರಿಗಣಿಸಿ, ಕೇವಲ ತಾಂತ್ರಿಕ ಕೋರ್ಸ್‌ಗಳಿಗೆ ಪರಿಗಣಿಸದೇ ಇರುವುದು ತಾರತಮ್ಯ.
02.ಸಿಇಟಿ ರ್‍ಯಾಂಕಿಂಗ್ ಪ್ರಕಟವಾದ ದಿನವೇ 2021ನೇ ಸಾಲಿನ ಪಿಯು ಅಂಕಗಳನ್ನು ಪರಿಗಣಿಸದಿರುವ ಬಗ್ಗೆ ಕೆಇಎ ಟಿಪ್ಪಣಿ ಹೊರಡಿಸಿದೆ. ಆಯ್ಕೆ ಪ್ರಕ್ರಿಯೆ ಆರಂಭಗೊಂಡು ಅದು ಮುಗಿಯುವ ಹಂತದಲ್ಲಿರುವಾಗ ಈ ರೀತಿ ಅರ್ಹತ ಮಾನದಂಡಗಳನ್ನು ಬದಲಿಸಲು ಸಾಧ್ಯವಿಲ್ಲ. 2022ರ ಎ. 18ರಿಂದ ಸಿಇಟಿ ಪ್ರಕ್ರಿಯೆ ಆರಂಭಗೊಂಡಿದ್ದು, ಜು. 30ರಂದು ಮುಕ್ತಾಯ ಹಂತದಲ್ಲಿರುವಾಗ ಕೆಇಎ ಆದೇಶ ಹೊರಡಿಸಿದೆ. ಇದು ಕಾನೂನುಬಾಹಿರ ಕ್ರಮ.