ಬೆಳಗಾವಿ: ‘ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಯಾವುದೇ ಮಹಾಪುರುಷರು, ವ್ಯಕ್ತಿಗಳ ಪೋಸ್ಟರ್ ಹಾಕಲು ಆಯಾ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದರು.
ಈ ಬಾರಿ ನಗರದಲ್ಲಿ ಅದ್ಧೂರಿ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆದ ಹಿನ್ನೆಲೆಯಲ್ಲಿ, ಮಂಗಳವಾರ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಅವರು, ಮಧ್ಯಮಗಳೊಂದಿಗೆ ಮಾತನಾಡಿದರು.
‘ಮಂಟಪಗಳಲ್ಲಿ ವೀರ ಸಾವರ್ಕರ್ ಭಾವಚಿತ್ರ ಹಾಕುವಂತೆ ಕೆಲವರು ಅಭಿಯಾನ ನಡೆಸಿದ್ದಾರೆ. ಸಾವರ್ಕರ್, ನೆಹರೂ, ಬಾಲಗಂಗಾಧರ ತಿಲಕ್, ಭಗತ್ ಸಿಂಗ್ ಸೇರಿದಂತೆ ಯಾರೇ ಮಹಾಪುರುಷರ, ಸಮಾಜ ಸುಧಾರಕರ ಭಾವಚಿತ್ರ ಅಥವಾ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಅನುಮತಿ ಪಡೆಯುವುದು ಕಡ್ಡಾಯ. ಖಾಸಗಿ ಸ್ಥಳಗಳಲ್ಲಿ ಯಾರು ಬೇಕಾದರೂ ತಮಗೆ ಬೇಕಾದ ಪೋಸ್ಟರ್‌ಗಳನ್ನು ಹಾಕಿಕೊಳ್ಳಬಹುದು. ಅದಕ್ಕೆ ಅನುಮತಿ ಅಗತ್ಯವಿಲ್ಲ’ ಎಂದರು.
‘ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಚತುರ್ಥಿಯನ್ನು ಸಂಕ್ಷಿಪ್ತವಾಗಿ ಆಚರಿಸಲಾಗಿದೆ. ಈ ಬಾರಿ ಎಲ್ಲರೂ ಅದ್ಧೂರಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಬೆಳಗಾವಿಯ ಗಣೇಶೋತ್ಸವ ದೇಶದಲ್ಲೇ ವಿಶೇಷತೆ ಪಡೆದಿದೆ. ಹೀಗಾಗಿ, ಅಗತ್ಯ ಭದ್ರತಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಮಾರ್ಗ ಪರಿಶೀಲನೆ, ಪಂಟಪದ ಸ್ಥಳಗಳ ಭೇಟಿ, ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಮಿತಿ ಸಭೆಗಳನ್ನು ನಡೆಸಿದ್ದಾರೆ. ಸುರಕ್ಷಿತ ಹಾಗೂ ಶಾಂತ ಹಬ್ಬಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೇವೆ’ ಎಂದರು.