ಚೇಳೂರು(ಗುಬ್ಬಿ): ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆದ ನಂತರ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಹಾಗೂ ಮುಖ್ಯಮಂತ್ರಿ ಪದವಿಗಾಗಿ ಕಿತ್ತಾಟ ನಡೆಯುತ್ತಿದೆ.
ಕಾಂಗ್ರೆಸ್ ದೇಶದಲ್ಲಿ ಅವನತಿಯತ್ತ ಸಾಗುತ್ತಿದೆ. 20 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಭಿವೃದ್ಧಿಗಿಂತ ಅಧಿಕಾರ ದಾಹವೇ ಮುಖ್ಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೂರಿದರು.
ಅಡಗೂರು ಗ್ರಾಮದ ಕೆರೆ ಕೋಡಿ ಹಾಗೂ ಇಡಕನಹಳ್ಳಿ 97 ರ ಹೇಮಾವತಿ ನಾಲೆ ಕುಸಿತದ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ದೇವಸ್ಥಾನ, ಮಂದಿರಗಳನ್ನು ಸುತ್ತಾಡಲು ಶುರುಮಾಡಿರುವುದು ಒಂದು ಕಡೆಯಾದರೆ ವೀರ ಸಾವರ್ಕರ್‌ರಂತಹ ದೇಶಭಕ್ತರ ಬಗ್ಗೆ ಟೀಕೆ ಮಾಡುವುದರ ಮೂಲಕ ದೇಶಭಕ್ತರನ್ನು ಅವಮಾನಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಇದೆಲ್ಲವನ್ನೂ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.