ಹಾಸನ: ಆತ ಆಕೆಯನ್ನು ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದ. ಆದರೆ ಪ್ರೀತಿಗೆ ಒಪ್ಪದ ಆಕೆಯನ್ನು ಅಪಘಾತ ಮಾಡಿ ಕೊಲೆ ಮಾಡಿದ್ದ. ಕೊಂದ ಬಳಿಕ ಈ ಪ್ರಕರಣದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ, ಆತನ ಲೆಕ್ಕಚಾರ ಅಂದು ಕೊಂಡಂತೆ ನಡೆಯಲಿಲ್ಲ.
ಪಾಪದ ಕೊಡ ತುಂಬಿತು ಎಂಬಂತೆ ಆತ ಮಾಡಿದ ಹೀನ ಕೃತ್ಯದಿಂದ ಇಂದು ಕಂಬಿ ಎಣಿಸುವ ಕಾಲ ಬಂದಿದೆ. ಹೌದು, ಇದು ಪಾಗಲ್ ಪ್ರೇಮಿಯ ಭಯಾನಕ ಕೊಲೆ ಪ್ರಕರಣ.
ಆಗಸ್ಟ್ 03ರಂದು ಹಾಸನದ ಹೊರವಲಯದ ಭುವನಹಳ್ಳಿ ಬಳಿ ಇರುವ ಸರ್ಕಲ್ ಹತ್ತಿರ ಆಲ್ಟೋ ಕಾರೊಂದು ಸರಣಿ ಅಪಘಾತ ಎಸಗಿ, ಸರ್ಕಲ್ನ ಒಂದು ಮೂಲೆಗೆ ರಭಸವಾಗಿ ನುಗ್ಗಿ ಡಿಕ್ಕಿ ಹೊಡೆದು ನಿಂತಿತ್ತು. ಈ ಕಾರಿನಲ್ಲಿ ಬಂದಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸಾರ್ವಜನಿಕರು ಓಡಿ ಬಂದು ಹಿಡಿಯುವಷ್ಟರಲ್ಲಿ ಆತ ಅಲ್ಲಿಂದ ಓಡಿ ಹೋಗಿದ್ದ. ಅಷ್ಟರಲ್ಲಿ ಅಲ್ಲಿ ನೆರೆದಿದ್ದ ಜನಕ್ಕೆ ಮತ್ತೊಂದು ವಿಚಾರ ತಿಳಿಯಿತು. ಏನೆಂದರೆ, ಅದೇ ಸರ್ಕಲ್ನ ಕೆಲ ದೂರದ ಅಣತಿಯಲ್ಲಿ ಆತ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದು ಬಂದಿದ್ದ. ಅಪಘಾತಕ್ಕೆ ಒಳಗಾದ ಯುವತಿಯ ಹೆಸರು ಶರಣ್ಯ. ಅಮಾನುಷವಾಗಿ ಡಿಕ್ಕಿ ಹೊಡೆದು ಓಡಿ ಹೋದವನ ಹೆಸರು ಭರತ್.
ಅಸಲಿಗೆ ಭರತ್ ಉದ್ದೇಶಪೂರ್ವಕವಾಗಿಯೇ ನಡೆದುಕೊಂಡು ಹೋಗುತ್ತಿದ್ದ ಶರಣ್ಯಗೆ ಹಿಂದಿನಿಂದ ಬಂದು ಗುದ್ದಿದ್ದ. ಶರಣ್ಯ ತಾನು ಕೆಲಸ ಮಾಡುತ್ತಿದ್ದ ಭಾರತಿ ಕಾಫಿ ಕ್ಯೂರಿಂಗ್ಗೆ ನಡೆದು ಕೊಂಡು ಹೋಗುವಾಗ ಭರತ್ ಈ ನೀಚ ಕೆಲಸ ಮಾಡಿದ್ದಾನೆ. ಇದಕ್ಕೆ ಕಾರಣ ಶರಣ್ಯ ಭರತ್ ನನ್ನ ಪ್ರೀತಿಸಲು ನಕಾರ ಎತ್ತಿದ್ದಳು ಎಂಬುದು. ಯಾವಾಗ ಶರಣ್ಯ ಸಿಗಲ್ಲ ಅಂತ ಗೊತ್ತಾಯ್ತೋ ಆಗ ಭರತ್, ಮೈಸೂರಿನಿಂದ ಬಾಡಿಗೆ ಕಾರೊಂದನ್ನು ಪಡೆದು ಬಂದು ಈ ಕೃತ್ಯ ಎಸಗಿದ್ದಾನೆ.