ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ ಪರಿಹಾರ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಳೆಯ ಮನೆಗಳು ಕುಸಿಯುವ ಸಂಭವವಿದ್ದರೆ ಅಂತಹ ಮನೆಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜನರನ್ನು ಸ್ಥಳಾಂತರಿಸಬೇಕು ಎಂದು ಅಧಿಕಾರಗಳಿಗೆ ತಿಳಿಸಿದರು.
ಯಳ್ಳೂರ ರಸ್ತೆಯ ಕೇಶವ ನಗರದಲ್ಲಿರುವ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, “ಅತಿವೃಷ್ಟಿಯಿಂದ ನಗರದಲ್ಲಿ 10 ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 4 ಮನೆಗಳು ಸಂಪೂರ್ಣವಾಗಿ ಕುಸಿದಿವೆ. ನೀರು ನುಗ್ಗಿರುವ ಮನೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.ಅದೇ ರೀತಿ ಮನೆ ಸಂಪೂರ್ಣವಾಗಿ ಕುಸಿದಿರುವುದನ್ನು ಪರಿಶೀಲಿಸಿ 48 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು. ಈ ನಿಟ್ಟಿನಲ್ಲಿ ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ, ದಾಖಲೆಗಳನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ ಎಂದರು.
Laxmi News 24×7